ಬೆಂಗಳೂರು, ಅ.2: ವಾರ್ಷಿಕ ಟೋಲ್ ಪದ್ಧತಿ ಅನುಷ್ಠಾನ, ವೇಗ ನಿಯಂತ್ರಣ ಅಳವಡಿಕೆ ನಿಯಮಾವಳಿ ಸಡಿಲಗೊಳಿಸಬೇಕು. ಶೇ.2ರಷ್ಟು ಟಿಡಿಎಸ್ ಪದ್ಧತಿ ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಎರಡನೆ ದಿನಕ್ಕೆ ಕಾಲಿಟ್ಟಿದ್ದು, ಸರಕು-ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಿ ಜನಜೀವನಕ್ಕೆ ತೊಂದರೆಯಾಗಿದೆ. ನಿನ್ನೆಯಿಂದ ದೇಶಾದ್ಯಂತ ಮುಷ್ಕರ ಆರಂಭವಾಗಿದ್ದು, ಸುಮಾರು 93 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಿದೆ.
ರಾಜ್ಯದಲ್ಲಿ ಗೂಡ್ಸ್ ಟೆಂಪೊ, ಟ್ಯಾಕ್ಸಿ, ಲಘು ವಾಹನಗಳು, ಲಾರಿ ಸೇರಿದಂತೆ ಸುಮಾರು 9 ಲಕ್ಷ ವಾಹನಗಳು ಸರಕು-ಸಾಗಾಣಿಕೆ ಮಾಡದಂತೆ ನಿಂತಲ್ಲಿಯೇ ನಿಂತಿರುವುದರಿಂದ ವ್ಯಾಪಾರ-ವಹಿವಾಟಿನಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಲಾರಿ ಮುಷ್ಕರದಿಂದ ಪ್ರತಿದಿನ ಸುಮಾರು 150 ಕೋಟಿ ರೂ. ನಷ್ಟ ಉಂಟಾಗುತ್ತದೆ. ಮರಳು, ಜಲ್ಲಿ ಕಲ್ಲು, ಇಟ್ಟಿಗೆ ಸಾಗಾಣಿಕೆ ಸ್ಥಗಿತಗೊಂಡಿದೆ. ದಿನಸಿ ಪದಾರ್ಥಗಳ ಲಾರಿಗಳು ಮಾರುಕಟ್ಟೆಗೆ ಬರುವುದು ನಿಂತಿದೆ. ಹೊರರಾಜ್ಯದ ಲಾರಿಗಳು ಹೈವೆಯಲ್ಲಿ ನಿಂತಿವೆ.
ನಿರ್ಮಾಣ ಕಾಮಗಾರಿ ಮೇಲೆ ನೇರ ಪರಿಣಾಮ ಬೀರಿದ್ದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಮರಳು, ಜಲ್ಲಿ, ಇಟ್ಟಿಗೆ, ಕಬ್ಬಿಣ ಮತ್ತಿತರ ವಸ್ತುಗಳ ಸಾಗಾಟ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಮೆಟ್ರೊ ಕಾಮಗಾರಿ ಮೇಲೂ ಕೂಡ ಮುಷ್ಕರದ ಬಿಸಿ ತಟ್ಟಿದೆ. ಹೈವೆಯುದ್ದಕ್ಕೂ ಲಾರಿಗಳು ಸಂಪೂರ್ಣವಾಗಿ ನಿಂತಿವೆ. ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಯನ್ನು ಮಾರುಕಟ್ಟೆಗೆ ತರಲಾರದೆ ಒದ್ದಾಡುತ್ತಿದ್ದಾರೆ. ಬೆಂಗಳೂರು ನಗರದ ಯಶವಂತಪುರ ಎಪಿಎಂಸಿ, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಯಲಹಂಕ ಮುಂತಾದ ಮಾರುಕಟ್ಟೆಗಳಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು, ಚಾಲಕರು, ಕ್ಲೀನರ್ಗಳು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕೆಲವೆಡೆ ಇವರಿಗೆ ಟೆಂಟ್ ಹಾಕಿ ಊಟದ ವ್ಯವಸ್ಥೆ ಮಾಡಿಕೊಡಲಾಗಿದೆ. ಒಟ್ಟಾರೆ ಮುಷ್ಕರದ ಪರಿಣಾಮ ದಿನೇ ದಿನೇ ಏರತೊಡಗಿದೆ.
20 ಸಾವಿರ ಕೋಟಿ ರೂ. ನಷ್ಟ
ನವದೆಹಲಿ: ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದೆ. ಮುಷ್ಕರದಿಂದಾಗಿ ಸರಕು ಸಾಗಣೆ ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅವಶ್ಯಕ ವಸ್ತುಗಳಾದ ಹಾಲು, ತರಕಾರಿ ಹಾಗೂ ಔಷಧ ಸಾಮಗ್ರಿಗಳ ಸರಬರಾಜಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ.
ತಮಿಳುನಾಡು, ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಚಂಡಿಗಡ ಸೇರಿದಂತೆ ವಿವಿಧ ಸ್ಥಳಗಳಿಗೆ ಸರಕು ಸಾಗಣೆ ಮಾಡಬೇಕಿರುವ ಲಾರಿಗಳು ಮುಷ್ಕರದಿಂದ ರಸ್ತೆಗಿಳಿಯದೇ ರಸ್ತೆಯಲ್ಲಿಯೇ ನಿಂತುಬಿಟ್ಟಿವೆ. ನಮ್ಮ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿದರೆ ಮಾತ್ರ ಮುಷ್ಕರ ವಾಪಸ್ ಪಡೆಯುವುದಾಗಿ (ಎಪಿಎಂಟಿಸಿ) ಅಖಿಲ ಭಾರತ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ತಿಳಿಸಿದೆ. ಟೋಲ್ ದರವನ್ನು ನೀಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅದರಲ್ಲಿ ಕೆಲವೊಂದು ಮಾರ್ಪಾಡುಗಳಾಗಬೇಕೆಂಬುದೆ ನಮ್ಮ ನಿಲುವು. ಇದರಲ್ಲಿ ಬದಲಾವಣೆ ಇಲ್ಲ ಎಂದು ಸಂಘ ಹೇಳಿದೆ.
ಕೇಂದ್ರದ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಮ್ ಪದ್ಧತಿ ಸರಿಯಾದುದಲ್ಲ ಇದನ್ನು ತಾವು ವಿರೋಧಿಸುವುದಾಗಿ ಅಖಿಲ ಭಾರತ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಭೀಮ್ವಾದ್ವಾ ತಿಳಿಸಿದ್ದಾರೆ. ಲಾರಿ ಮುಷ್ಕರದಿಂದ ಎರಡು ದಿನದಲ್ಲಿ ಸುಮಾರು ಇಪ್ಪತ್ತು ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಸಂಘ ಹೇಳಿದೆ. ಮುಷ್ಕರ ವಾಪಸ್ ಪಡೆಯಿರಿ. ಡಿಸೆಂಬರ್ 1 ರಿಂದ ಟೋಲ್ ಕಲೆಕ್ಷನ್ ಬದಲಾಗಿ, ಎಲೆಕ್ಟ್ರಾನಿಕ್ ಟೋಲಿಂಗ್ ಪದ್ಧತಿಯನ್ನು ಅಳವಡಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಐಎಂಟಿಸಿಗೆ ಮನವಿ ಮಾಡಿದ್ದಾರೆ.
ಟೋಲ್ ಸಂಗ್ರಹದ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಹೊಡೆಯುತ್ತಿದೆ
ಬೆಂಗಳೂರು: ಟೋಲ್ ಸಂಗ್ರಹದ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು. ಪ್ರತಿ ವರ್ಷ 14,504 ಕೋಟಿ ಟೋಲ್ ಮೂಲಕ ಸಂಗ್ರಹವಾಗುತ್ತದೆ. ಇಷ್ಟು ಹಣವನ್ನು ನಾವು ವಾರ್ಷಿಕವಾಗಿ ಕೊಡಲು ಸಿದ್ಧರಿದ್ದೇವೆ. ಆದರೆ, ಸರ್ಕಾರ ವಾರ್ಷಿಕ ಟೋಲ್ ಪದ್ಧತಿ ಜಾರಿಗೊಳಿಸಲು ಸಿದ್ಧವಿಲ್ಲ. ಟೋಲ್ ಸಂಗ್ರಹದ ಮೂಲಕ ಹಣ ಲೂಟಿ ಹೊಡೆಯುತ್ತಿದೆ. ಬೆಂಗಳೂರಿನಿಂದ ಬಾಂಬೆಗೆ ತೆರಳಲು 16 ಗಂಟೆ ಬೇಕಾಗುತ್ತದೆ. ಆದರೆ, 24 ಟೋಲ್ಗಳನ್ನು ದಾಟಿ ಹೋಗಬೇಕಾಗಿರುತ್ತದೆ. ಇಲ್ಲಿ ಲಾರಿ ಚಾಲಕರಿಗೆ 7 ಗಂಟೆ ವ್ಯಯವಾಗುತ್ತದೆ. ಇದನ್ನು ನಿವಾರಿಸಿದರೆ ಇಂಧನ ಮತ್ತು ಸಮಯ ಉಳಿತಾಯವಾಗುತ್ತದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವರದಿ ನೀಡಿರುವ ಪ್ರಕಾರ, ಹೈವೆಗಳಲ್ಲಿ ಟೋಲ್ ಬಳಿ ಲಾರಿಗಳು ನಿಲ್ಲುವುದರಿಂದ ಇಂಧನ ಮತ್ತು ಸಮಯ ವ್ಯರ್ಥದಿಂದ ವಾರ್ಷಿಕ ಸುಮಾರು 87 ಸಾವಿರ ಕೋಟಿ ನಷ್ಟವಾಗುತ್ತದೆ ಎಂಬ ವರದಿ ನೀಡಿದೆ. ದೇಶಾದ್ಯಂತ ಇರುವ 377 ಟೋಲ್ಗಳನ್ನು ತೆಗೆದುಹಾಕಿದರೆ ಈ ಹಣ ಉಳಿತಾಯವಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಒಂದೇ ಬಾರಿ 14,504 ಕೋಟಿ ಬರುತ್ತದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದ್ದು ವಿಫಲವಾಗಿದೆ. ಅದಕ್ಕಾಗಿ ನಾವು ಮುಷ್ಕರ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಗಬ್ಬೂರ್ ರಾಷ್ಟ್ರೀಯ ಹೆದ್ದಾರಿಗೆ 93 ಕೋಟಿ ವೆಚ್ಚವಾಗಿತ್ತು. 2004ರಿಂದ ಟೋಲ್ ಸಂಗ್ರಹದಲ್ಲಿ 240 ಕೋಟಿ ಹಣ ಬಂದಿದೆ. ಇನ್ನೂ 10 ವರ್ಷಗಳ ಕಾಲ ಇದನ್ನು ಗುತ್ತಿಗೆ ನೀಡಲಾಗಿದೆ. ಅದೇ ರೀತಿ ನೆಲಮಂಗಲ-ತುಮಕೂರು ಹೈವೆ ನಿರ್ಮಾಣಕ್ಕೆ 265 ಕೋಟಿ ವೆಚ್ಚವಾಗಿತ್ತು. ಜಾಸ್ಟೋಲ್ ಕಂಪೆನಿಗೆ ಗುತ್ತಿಗೆ ನೀಡಿದ್ದು, ಈವರೆಗೆ 600 ಕೋಟಿ ರೂ. ಸಂಗ್ರಹವಾಗಿದೆ. ಇನ್ನೂ 15 ವರ್ಷಗಳ ಕಾಲ ಗುತ್ತಿಗೆ ಮುಂದುವರೆಸಲಾಗಿದೆ. ಅದೇ ರೀತಿ ಹೊಸೂರು ರಸ್ತೆಯ ಎಲಿವೇಟೆಡ್ ಹೈವೆಗೆ 900 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು. 1110 ಕೋಟಿ ರೂ.ಗಳು ಟೋಲ್ ಸಂಗ್ರಹದಿಂದ ಬಂದಿದೆ. 143 ಸರ್ಕಾರಿ ಟೋಲ್ಗಳಿವೆ. ಈ ಟೋಲ್ಗಳನ್ನು ಕೂಡ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಈ ಎಲ್ಲ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಪಡೆಯಲಾಗಿದ್ದು, ಇದೇ ರೀತಿ ದೇಶಾದ್ಯಂತ 373 ಟೋಲ್ಗಳಲ್ಲೂ ಲೂಟಿ ಮಾಡಲಾಗುತ್ತಿದೆ. ಈ ಟೋಲ್ ಸಂಗ್ರಹ ಪದ್ಧತಿ ನಿಲ್ಲಿಸಿ ವಾರ್ಷಿಕ ಟೋಲ್ ಪದ್ಧತಿಯನ್ನು ಅಳವಡಿಸಬೇಕು ಎಂದು ಅವರು ಆಗ್ರಹಿಸಿದರು.
