ಕನ್ನಡ ವಾರ್ತೆಗಳು

ಸನಾತನ ಸಂಸ್ಥೆಯ ಮೇಲಿನ ನಿರ್ಬಂಧಕ್ಕೆ ಒತ್ತಡ :ಹಿಂದು ಸಂಘಟನೆಗಳಿಂದ ಪ್ರತಿಭಟನೆ.

Pinterest LinkedIn Tumblr

Hindu_sabha_protest_1

ಮಂಗಳೂರು, ಅ.2:  ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಒತ್ತಡ ಹೇರುತ್ತಿರುವುದನ್ನು ಖಂಡಿಸಿ ವಿವಿಧ ಹಿಂದು ಸಂಘಟನೆಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದರ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದವು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿಂದೂ ಯುವ ಸೇನೆಯ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಇಂದು ಹಿಂದು ರಾಷ್ಟ್ರದಲ್ಲಿ ಹಿಂದೂಗಳೇ ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಬಂದಿರುವುದು ವಿಪರ್ಯಾಸ. ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿರುವ ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪ ಹೇರಿರುವುದು ಖಂಡನೀಯ ಎಂದರು.

Hindu_sabha_protest_2 Hindu_sabha_protest_3 Hindu_sabha_protest_4 Hindu_sabha_protest_5

ಮೂಡಬಿದ್ರೆ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ನಮ್ಮ ದೇಶಕ್ಕೆ ಸಾಧಕರನ್ನು ನೀಡಿದ ಸನಾತನ ಸಂಸ್ಥೆಯನ್ನು ನಿರ್ಬಂಧಿಸಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಆಪತ್ತು ಖಚಿತ ಎಂದು ಎಚ್ಚರಿಸಿದರು. ಸನಾತನ ಸಂಸ್ಥೆಯವರು ಈ ರಾಷ್ಟ್ರ ಹಿಂದು ರಾಷ್ಟ್ರವಾಗಿ ಉಳಿಯಬೇಕೆಂದು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂಸ್ಥೆಯ ಮೇಲೆ ನಿರ್ಬಂಧ ಹೇರಿದರೆ ಶ್ರೀರಾಮ ಸೇನೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಶ್ರೀರಾಮ ಸೇನೆಯ ಜಿಲ್ಲಾ ಪ್ರಾಂತ ಉಪಾಧ್ಯಕ್ಷ ಕುಮಾರ ಮಾಲೆಮಾರ್ ಎಚ್ಚರಿಕೆ ನೀಡಿದರು.

ವೃಥಾ ಆರೋಪ ಹೊರಿಸಲು ಸನಾತನ ಸಂಸ್ಥೆ ಮಾಡಿದ ತಪ್ಪೇನು? ಇಂದು ನಮ್ಮ ದೇಶದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ, ದೇಶದ್ರೋಹಿ ಘೋಷಣೆಗಳನ್ನು ಹಾಕುತ್ತಾರೆ, ದಿನಂಪ್ರತಿ ಬಾಂಬ್ ಸ್ಫೋಟ ಮಾಡಿ ಜೀವ ಹಾನಿ ಮಾಡುತ್ತಾರೆ. ಇವರನ್ನು ಪ್ರತ್ಯೇಕವಾದಿಗಳು ಎಂದು ಹೇಳುವ ಸರ್ಕಾರ, ಅವರ ಮೇಲೆ ಎನೂ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ದೇಶದ ಮುಖ್ಯ ವಾಹಿನಿಯಲ್ಲಿ ನಿಂತು ರಾಷ್ಟ್ರ, ಧರ್ಮದ ರಕ್ಷಣೆ ಮಾಡುವ ಸಂಸ್ಥೆಯ ಮೇಲೆ ನಿಷೇಧ ಮಾಡುವುದು ಯಾವ ನ್ಯಾಯ ಎಂದು ಹಿಂದು ಮಹಾಸಭಾದ ರಾಜ್ಯ ವಕ್ತಾರ ಧರ್ಮೇಂದ್ರ ಪ್ರಶ್ನಿಸಿದರು.

ಸಂಸ್ಥೆಯು ಸಮಾಜದಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆಗಾಗಿ ಬಾಲ ಸಂಸ್ಕಾರ ವರ್ಗ ಹಾಗೂ ಧರ್ಮ ಶಿಕ್ಷಣ ಕೊಡುವಂತಹ ಕಾರ್ಯವನ್ನು ಮಾಡುತ್ತಿದೆ. ಇಂತಹ ಧರ್ಮಕಾರ್ಯ ಮಾಡುವಂತಹ ಸಂಘಟನೆಯನ್ನು ಭಯೋತ್ಪಾಧಕ ಸಂಘಟನೆ ಎಂದು ಹೇಳುವುದು ಸರಿಯೇ? ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರ ವಿಜಯಕುಮಾರ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಶ್ರೀರಾಮಸೇನೆ, ಹಿಂದೂ ಮಹಾಸಭಾ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಹಿಂದೂ ಯವ ಸೇನೆ, ಶ್ರೀ ಪತಂಜಲಿಯ, ಹಿಂದೂ ಜಾಗರಣಾ ವೇದಿಕೆ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಭಟನೆಯ ಬಳಿಕ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರಗಳನ್ನು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಲಾಯಿತು.

Write A Comment