ಬೆಂಗಳೂರು, ಸೆ.30- ದಿನನಿತ್ಯ ಗೃಹೋಪಯೋಗಿ ಬಳಕೆಗೆ ಉಪಯೋಗಿಸುವ ಸ್ವಚ್ಚತಾ ರಾಸಾಯನಿಕ ದ್ರವ್ಯಗಳನ್ನು ನಕಲಿಯಾಗಿ ತಯಾರಿಸುತ್ತಿದ್ದ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿ 50ಲಕ್ಷ ರೂ.ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಮುಂಬೈನ ನೂರ್ಜೈಸುಬಾಯ್ ಲಡಾಬಾಯ್ (36) ಬಂಧಿತ ಆರೋಪಿ. ನಗರದಲ್ಲಿ ಹಾರ್ಪಿಕ್, ಲೈಜೋಲ್, ಫೆಮ್, ಓಡೊನಿಲ್, ಡೈವರ್ಸೇ ಟಾಸ್ಕಿ, ಕೊಲಿನ್, ಪ್ರೀಮಿಯರ್ ಮತ್ತಿತರ ಕಂಪೆನಿಗಳ ಲೊಗೋ ಹಾಗೂ ಹೆಸರುಗಳನ್ನು ಬಳಸಿಕೊಂಡು ಕಳಪೆ ಗುಣಮಟ್ಟದ ಕೆಮಿಕಲ್ ಹಾಗೂ ಕಚ್ಛಾ ಸಾಮಾಗ್ರಿಗಳನ್ನು ಬಳಸಿ ನಕಲಿಯಾಗಿ ತಯಾರಿಸಿದ ಸಾಮಾಗ್ರಿಗಳನ್ನು ನಕಲಿ ಪ್ಯಾಕಿಂಗ್ ಕವರ್ನಿಂದ ಪ್ಯಾಕ್ ಮಾಡಿ ಅಸಲಿ ಕಂಪೆನಿಯ ಮಾಲುಗಳು ಕಾಣುವಂತೆ ಗ್ರಾಹಕರಿಗೆ ವಂಚಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಕೋರಮಂಗಲದ 8ನೆ ಬ್ಲಾಕ್ನ 2ನೆ ಕ್ರಾಸ್ನಲ್ಲಿನ ಶ್ರೀ ಅಣ್ಣಪ್ಪ ಸ್ವಾಮಿ ಕೃಪಾ ಎಂಬ ಮನೆಯ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಕೆಲಸಕ್ಕಿಟ್ಟುಕೊಂಡಿದ್ದ ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸಿ 50 ಲಕ್ಷ ರೂ. ಮೌಲ್ಯದ ನಕಲಿ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಅಣ್ಣ ಮಹೇಂದ್ರ್ ತಲೆಮರೆಸಿಕೊಂಡಿದ್ದು, ಆತನೊಂದಿಗೆ ಸೇರಿ ಕಳೆದ ಮೂರು ತಿಂಗಳ ಹಿಂದೆ ಮನೆಯನ್ನು 25ಸಾವಿರ ರೂ.ಗೆ ಬಾಡಿಗೆ ಪಡೆದು ದಿನನಿತ್ಯ ಬಳಕೆಯ ನಕಲಿ ವಸ್ತುಗಳನ್ನು ತಯಾರಿಸುತ್ತಿದ್ದದ್ದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.