ದುಬೈ ಇಂಡಿಯನ್ ಕಮ್ಯೂನಿಟಿ ಮತ್ತು ದುಬೈ ಹೆಲ್ತ್ ಅಥಾರಿಟಿಯ ಸಹಯೋಗದೊಂದಿಗೆ ಅಲ್ ಜದಫ್ ನ ಲತೀಫಾ ಆಸ್ಪತ್ರೆಯಲ್ಲಿ ಸಪ್ಟೆಂಬರ್ 29 ರಂದು ರಕ್ತದಾನ ಶಿಬಿರ ಮತ್ತು ಆರೋಗ್ಯ ಜಾಗೃತಿ ಅಭಿಯಾನ ನಡೆಯಿತು.
ಅಭಿಯಾನವನ್ನು ರಕ್ತದಾನ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ದುಬೈ ಇಂಡಿಯನ್ ಕಮ್ಯೂನಿಟಿಯ ಅಧ್ಯಕ್ಷ ಇಮ್ರಾನ್ ಖಾನ್ ಎರ್ಮಾಳ್ ರವರು “ರಕ್ತಕ್ಕೆ ನಿರಂತರವಾಗಿ ಬೇಡಿಕೆ ಇರುವುದರಿಂದ ತುರ್ತು ಸಂಧರ್ಬದಲ್ಲಿ ಇನ್ನೊಬ್ಬರ ಜೀವ ಉಳಿಸಲು ಸ್ವಯ೦ಪ್ರೇರಿತನಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ತದಾನ ನೀಡಲು ಮುಂದಾಗಬೇಕಾಗಿದೆ, ಅಲ್ಲದೇ ಸಂಗ್ರಹಿಸಲಾದ ಕೆಂಪು ರಕ್ತಕಣಗಳು 35 ದಿನಗಳವರೆಗೆ ಮಾತ್ರ ತಮ್ಮ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ಪ್ಲೇಟ್ ಲೆಟ್ ಗಳನ್ನು ಕೇವಲ 5 ದಿನಗಳವರೆಗೆ ಮಾತ್ರ ಶೇಕರಿಸಿಡಬಹುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರೆ ಮಾತ್ರ ಅವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ” ಎಂದರು.

ಪ್ರಧಾನ ಕಾರ್ಯದರ್ಶಿ ಯುಸುಫ್ ಅನ್ಸಾರ್ ಮಾತನಾಡಿ ಪ್ರತೀ 3 ತಿಂಗಳಿಗೊಮ್ಮೆ ರಕ್ತದಾನ ಶಿಬಿರ ಮತ್ತು ದುಬೈಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿದು ಕ್ಯಾಂಪ್ ಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಉಚಿತ ಕಣ್ಣಿನ ಮತ್ತು ಹೃದಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಿರಂತರವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ದುಬೈ ಇಂಡಿಯನ್ ಕಮ್ಯೂನಿಟಿಯ ಆರೋಗ್ಯ ವಿಭಾಗದ ಸಂಚಾಲಕಿ ಅಶ್ವಿನಿ ಮೆಂಡನ್ ಶಿಬಿರದ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿದರು. ಈ ಸಂಧರ್ಬದಲ್ಲಿ ಉಪಾಧ್ಯಕ್ಷ ಆದರ್ಶ್ ಆಚಾರ್ಯ, ಕಾರ್ಯದರ್ಶಿ ಸಯೀದ, ವಿನೀತ್ ಶೆಟ್ಟಿ, ಅಶ್ರಫ್, ಪದ್ಮನಾಭ ಭಟ್, ಮುಕ್ತಾರ್, ಸಯ್ಯದ್ ಉಪಸ್ಥಿತರಿದ್ದರು

















