ಕರ್ನಾಟಕ

ಎಸ್.ಎಂ.ಕೃಷ್ಣ ಮಾರ್ಗದರ್ಶನದಲ್ಲಿ ಕಳಸಾ-ಬಂಡೂರಿ ವಿವಾದ ಬಗೆ ಹರಿಸಲು ಒತ್ತಾಯ

Pinterest LinkedIn Tumblr

smಬೆಂಗಳೂರು, ಸೆ.30- ಕಳಸಾ ಬಂಡೂರಿ ಸಮಸ್ಯೆ ಬಗೆ ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಲಹೆ ಪಡೆಯಬೇಕು ಎಂದು ಹಿರಿಯ ವಕೀಲ ನವೀನ ಚಿಲ್ಲಾಳ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಅವರು ಕೇವಲ ಸಚಿವ ಸಂಪುಟ ವಿಸ್ತರಣೆಗೆ ಒತ್ತು ಕೊಡದೆ ರಾಜ್ಯದ ಜನರ ಸಮಸ್ಯೆಗಳ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಸ್.ಎಂ.ಕೃಷ್ಣ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾಗಿದ್ದವರು. ಬುದ್ದಿವಂತ ರಾಜಕಾರಣಿ. ಅವರ ಮಾತಿಗೆ ರಾಷ್ಟ್ರಮಟ್ಟದಲ್ಲಿ ಬೆಲೆ ಇದೆ. ಪ್ರಧಾನ ಮಂತ್ರಿಯವರು ಕೂಡಲೇ ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು.

ಅಲ್ಲಿಗೆ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ, ಅನಂತಕುಮಾರ್, ಯಡಿಯೂರಪ್ಪ ಅವರಂತಹ ನಾಯಕರನ್ನು ಮುಖ್ಯಮಂತ್ರಿ ಕರೆದುಕೊಂಡು ಹೋಗಬೇಕು ಎಂದು ಆಗ್ರಹಿಸಲಾಗಿದೆ.
ಪ್ರಧಾನಮಂತ್ರಿಯನ್ನು ರಾಜ್ಯದ ಸರ್ವ ಪಕ್ಷಗಳ ನಿಯೋಗ ಭೇಟಿ ಮಾಡಿ 20 ದಿನ ಕಳೆದಿದೆ. ಎರಡು ರಾಜ್ಯಗಳ ಪ್ರತಿಪಕ್ಷಗಳ ನಾಯಕರ ಜೊತೆ ಮಾತನಾಡುವಂತೆ ಪ್ರಧಾನ ಮಂತ್ರಿಯವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ಅದರಂತೆ ಮುಖ್ಯಮಂತ್ರಿ ಗೋವಾ, ಮಹಾರಾಷ್ಟ್ರ ರಾಜ್ಯಗಳ ಪ್ರತಿಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆಯೇ ಎಂಬುದು ಗೋತ್ತಿಲ್ಲ. ಒಂದು ವೇಳೆ ಚರ್ಚೆ ಮಾಡದಿದ್ದರೆ ಅದು ಪ್ರಧಾನಿಯವರಿಗೆ ಮಾಡಿದ ಅವಮಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜಿ ಸೂತ್ರದ ಮೂಲಕ ಕಳಸಾ ಬಂಡೂರಿ ಸಮಸ್ಯೆಯನ್ನು ಬಗೆ ಹರಿಸಬೇಕು. ಅದಕ್ಕೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮುಖ್ಯಮಂತ್ರಿಯವರು ಮಾಡಬೇಕು ಎಂದು ಸಲಹೆ ನೀಡಲಾಗಿದೆ.

Write A Comment