ಬೆಂಗಳೂರು, ಸೆ.29: ಆಗ್ನೇಯ ವಿಭಾಗದ ಪೊಲೀಸರು ಆರು ಮಂದಿ ಸರಗಳ್ಳರನ್ನು ಬಂಧಿಸಿ 15ಲಕ್ಷ ರೂ. ಮೌಲ್ಯದ 505 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ ನಗರದಲ್ಲಿ ನಡೆದಿದ್ದಂತಹ ಒಟ್ಟು 32ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣ ಪತ್ತೆಯಾದಂತಾಗಿದೆ.
ವೈಟ್‌ಪೀಲ್ಡ್ ಠಾಣೆ:
ನಗರದ ವಿವಿಧೆಡೆ 20ಕ್ಕೂ ಹೆಚ್ಚು ಸರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಸರ ಅಪಹರಣಕಾರರನ್ನು ಬಂಧಿಸಿರುವ ವೈಟ್‌ಪೀಲ್ಡ್ ಠಾಣೆ ಪೊಲೀಸರು 2.50ಲಕ್ಷ ರೂ. ಮೌಲ್ಯದ 95 ಗ್ರಾಂ ತೂಕದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ನಡವತ್ತಿ ಕಾಲೋನಿಯ ಸತೀಶ್‌ಕುಮಾರ್ (27) ಮತ್ತು ಅಂಬೇಡ್ಕರ್ ಕಾಲೋನಿಯ ಗೋಪಿ(35) ಬಂಧಿತ ಸರಗಳ್ಳರು. ಈ ಇಬ್ಬರು ನಗರದ ರಾಮಮೂರ್ತಿನಗರ, ಮಡಿವಾಳ ಠಾಣಾ ವ್ಯಾಪ್ತಿಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ಸರ ಅಪಹರಣ ಮಾಡುತ್ತಿದ್ದರು. ಇವರಿಂದ 95 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಪಿ ಡಾ.ರೋಹಿಣಿ ಕಟೋಚ್ ಸಪಟ್ ಮಾರ್ಗದರ್ಶನದಲ್ಲಿ ಏರ್‌ಪೋರ್ಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ದುಗ್ಗಪ್ಪ, ವೈಟ್‌ಪೀಲ್ಡ್ ಠಾಣೆ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ, ಪಿಎಸ್‌ಐ ನಾಗಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಾಡುಗೋಡಿ:
ಒಂಟಿಯಾಗಿ ನಡೆದು ಹೋಗುವ ಮಹಿಳೆಯರನ್ನು ಹಾಗೂ ವಿಳಾಸ ಕೇಳುವ ನೆಪದಲ್ಲಿ ಮೋಟಾರ್ ಬೈಕ್‌ಗಳಲ್ಲಿ ಸಂಚರಿಸಿ ಸರಗಳನ್ನು ಅಪಹರಿಸುತ್ತಿದ್ದ ನಾಲ್ಕು ಮಂದಿ ಸರಗಳ್ಳರನ್ನು ಕಾಡುಗೋಡಿ ಪೊಲೀಸರು ಬಂಧಿಸಿ 410 ಗ್ರಾಂ ತೂಕದ 12.50 ಲಕ್ಷ ರೂ.ಮೌಲ್ಯದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೆಂಕಟಪತಿ (23), ರಾಜುನಗರದ ಪ್ರೇಮ್(19), ಮಾಲೂರು ತಾಲ್ಲೂಕಿನ ಸಾಕರಾಜ(25), ಮಂಜುನಾಥ(22) ಬಂಧಿತ ಸರಗಳ್ಳರಾಗಿದ್ದು, ಇವರ ಬಂಧನದಿಂದ 12 ಸರಗಳವು ಪ್ರಕರಣ ಪತ್ತೆಯಾಗಿದೆ.
