ತುಮಕೂರು, ಸೆ.29: ವ್ಯಕ್ತಿಯೊಬ್ಬರ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿ ಬಳಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.
ತುಮಕೂರಿನ ಹೃದಯ ಭಾಗದಲ್ಲಿನ ಶೆಟ್ಟಿಹಳ್ಳಿ ಬಳಿ ವಿಜಯನಗರದ ನಿವಾಸಿ ಸೋಮಶೇಖರ್(40) ಎಂಬುವರ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆ 7.30ರಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವವಿದ್ದದ್ದು ಕಂಡು ಸುತ್ತಮುತ್ತಲಿನ ನಿವಾಸಿಗಳು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ರುಂಡ-ಮುಂಡ ಬೇರ್ಪಟ್ಟ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಈ ವ್ಯಕ್ತಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇವರನ್ನು ಕೊಲೆ ಮಾಡಿ ರೈಲು ಬರುವ ಸಮಯ ನೋಡಿಕೊಂಡು ಹಳಿ ಮೇಲೆ ಎಸೆದು ಹೋಗಿದ್ದಾರೋ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಪತಿಯನ್ನು ಯಾರೋ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಮಲಗಿಸಿದ್ದಾರೆ ಎಂದು ಪತ್ನಿ ಪದ್ಮಾ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯ ಕಾಂತರಾಜು, ವಸಂತ್‌ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ರೈಲ್ವೆ ಹಳಿ ಬಳಿ ಮೃತ ದೇಹಗಳು ಪತ್ತೆಯಾಗುತ್ತಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
