ಬೆಳಗಾವಿಯ ಟಿಳಕವಾಡಿ ವೀರಸೌಧದಲ್ಲಿ 1924ರಲ್ಲಿ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಅದೇ ಸ್ಥಳದಲ್ಲಿ ನಿನ್ನೆ ಬುಧವಾರ ಮತ್ತೊಮ್ಮೆ ವಂದೇ ಮಾತರಂ ಪ್ರತಿಧ್ವನಿ. ರಾಷ್ಟ್ರಪ್ರೇಮ ಮತ್ತು ರಾಷ್ಟ್ರಧ್ವಜ ಕುರಿತ ಅಭಿಮಾನದ ಮಾತುಗಳು… ಆಗ ರಿಯಲ್, ಈಗ ರೀಲ್!
‘ಜುಲೈ 22, 1947’ ಇದು ಆ ಸಿನಿಮಾದ ಹೆಸರು. ಸ್ವಾತಂತ್ರ್ಯ ಹೋರಾಟದ ವೇಳೆ ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ರಾಷ್ಟ್ರಧ್ವಜ ರೂಪಿಸಿ 1947ರ ಜು. 22ರಂದು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿತ್ತು. ಆ ಹಿನ್ನೆಲೆಯೊಂದಿಗೆ ರಾಷ್ಟ್ರಪ್ರೇಮ ರಕ್ತಗತ ಮಾಡಿಕೊಂಡಿದ್ದ ಕುಟುಂಬದ ಕಥೆಯೇ ಚಿತ್ರದ ಜೀವಾಳ. ಪತ್ರಕರ್ತ, ಸಾಹಿತಿ ಡಾ. ಸರಜೂ ಕಾಟ್ಕರ್ ಸಿನಿಮಾಗೋಸ್ಕರವೇ ಬರೆದಿರುವ ಕಥೆಯಂತೆ ಇದು! ವೀರಸೌಧ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ
ವಂದೇ ಮಾತರಂ ಹೇಳುವ ಸನ್ನಿವೇಶದ ಶೂಟಿಂಗ್. ಸಂಸದ ಸುರೇಶ್ ಅಂಗಡಿ ಕ್ಲಾಪ್ ಮಾಡಿದರೆ, ಜಿಲ್ಲಾಧಿಕಾರಿ ಎನ್. ಜಯರಾಂ ಕ್ಯಾಮರಾ ಚಾಲನೆ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರಿಂದ ಧ್ವಜಾರೋಹಣ. ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಅವರಿಂದ ಚಿತ್ರತಂಡಕ್ಕೆ ಆಶೀರ್ವಚನ.
ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧರಿಸಿ ಹೊರಬಂದ ‘ಇಂಗಳೆಮಾರ್ಗ’ ರಾಜ್ಯಪ್ರಶಸ್ತಿಗೆ ಭಾಜನವಾಗಿದೆ. ಈಗ ಬಹುತೇಕ ಅದೇ ತಂಡ ‘ಜುಲೈ 22, 1947’ಕ್ಕೂ
ಶ್ರಮಿಸಲಿದೆ. ವಿಶಾಲ್ರಾಜ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಆ ಚಿತ್ರಕ್ಕೆ ಘನಶ್ಯಾಮ ಭಾಂಡಗೆ ನಿರ್ವಪಕರಾಗಿದ್ದರೆ, ಈ ಚಿತ್ರಕ್ಕೆ ಹಣ ಹೂಡುತ್ತಿರುವವರು ಕೆ.ಎಂ. ನಂಜೇಗೌಡ. ಸುಚೇಂದ್ರ ಪ್ರಸಾದ್, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಬೆಳಗಾವಿ, ಅಮೃತಸರ, ಸಾಬರಮತಿ, ವಾಘಾ ಗಡಿ, ಜಲಿಯನ್ವಾಲಾ ಬಾಗ್ ಮುಂತಾದೆಡೆ ಶೂಟಿಂಗ್ ಮಾಡುವುದು ವಿಶಾಲ್ರಾಜ್ ಯೋಜನೆ. ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಅಡಿಯಿಡುತ್ತಿರುವುದು ಮತ್ತೊಂದು ಹೈಲೈಟ್.