ಕರ್ನಾಟಕ

ಸಿದ್ದು ಅಹಿಂದ ಮಂತ್ರಕ್ಕೆ ಬಿಜೆಪಿಯ ತಿರುಮಂತ್ರ: ಸಮಾವೇಶ ಆಯೋಜನೆ

Pinterest LinkedIn Tumblr

bjp-logo-2-sidduಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರಕ್ಕೆ ತಿರುಗೇಟು ನೀಡಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಜ್ಜಾಗುತ್ತಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಹಿಂದ ವರ್ಗಕ್ಕೆ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳನ್ನೇನೂ ನೀಡಿಲ್ಲ ಎಂಬುದನ್ನು ಅಂಕಿ- ಅಂಶಗಳ ಸಮೇತ ಜನರ ಮುಂದಿಡಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ರಾಜ್ಯಾದ್ಯಂತ ಹಿಂದುಳಿದ ಮತ್ತು ದಲಿತ ವರ್ಗದ ಸಮಾವೇಶಗಳನ್ನು ಹಮ್ಮಿಕೊಳ್ಳುವುದೂ ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಲು ನಿರ್ಧರಿಸಿದೆ. ಜತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವರ್ಗಕ್ಕೆ ಆಗಿರುವ ಅನುಕೂಲ ಎಷ್ಟು ಮತ್ತು ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಈ ವರ್ಗಕ್ಕೆ ಆಗಿರುವ ವೈಫ‌ಲ್ಯಗಳೇನು ಎಂಬುದರ ಬಗ್ಗೆ ದಾಖಲೆಯನ್ನೂ ಬಿಡುಗಡೆ ಮಾಡಲು ಉದ್ದೇಶಿಸಿದೆ.

ಇದಕ್ಕೆ ಪೂರಕವಾಗಿ ಇದೇ ತಿಂಗಳ 25ರಂದು ಬಿಜೆಪಿಯ ಮುಖಂಡರು, ಹಾಲಿ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರ ಮಹತ್ವದ ಸಭೆಯನ್ನು ನಗರದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಹೋರಾಟದ ರೂಪುರೇಷೆ ಸಿದ್ಧಗೊಳ್ಳಲಿದೆ. ಇದರ ಜವಾಬ್ದಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ವೊಂದರಲ್ಲಿ ದಿನವಿಡೀ ನಡೆದ ಬಿಜೆಪಿಯ ಆಯ್ದ ಮುಖಂಡರ ಸಭೆಯಲ್ಲಿ ಸಿದ್ದ ರಾಮಯ್ಯ ಅವರ ಅಹಿಂದ ವರ್ಗದ ಮಂತ್ರಕ್ಕೆ ಎದಿರೇಟು ನೀಡುವ ತೀರ್ಮಾನ ಕೈಗೊಳ್ಳಲಾಯಿತು.

ಸೋಮವಾರ ಸಂಘ ಪರಿವಾರದ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅಹಿಂದ ವರ್ಗದ ಮತದಾರರನ್ನು ಸಿದ್ದರಾಮಯ್ಯ ಹಿಡಿದಿಡಲು ಮಾಡುತ್ತಿರುವ ಪ್ರಯತ್ನವನ್ನು ವಿಫ‌ಲಗೊಳಿಸಿ ಬಿಜೆಪಿಯತ್ತ ಸೆಳೆಯುವ ಕುರಿತು ಕಾರ್ಯಕ್ರಮ ರೂಪಿಸು ವಂತೆ ಸಲಹೆ ನೀಡಲಾಗಿತ್ತು. ಅದರಂತೆ ಮುಂಬರುವ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಹಿಂದುಳಿದ ಮತ್ತು
ದಲಿತ ವರ್ಗದ ಮತದಾರರನ್ನು ಸೆಳೆಯುವ ಅಗತ್ಯವಿದೆ. ಇಲ್ಲದಿದ್ದರೆ ಪಕ್ಷಕ್ಕೆ ನಷ್ಟ ಉಂಟಾಗಬ ಹುದು ಎಂಬುದರ ಬಗ್ಗೆ ಬಿಜೆಪಿ ನಾಯಕರ ಮಂಗಳವಾರದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ ಮೂಲಗಳು ತಿಳಿಸಿವೆ.

ಮುದ್ರಾ ಬ್ಯಾಂಕ್‌ ಕುರಿತು ಅರಿವು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ವಿಶೇಷವಾಗಿ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಜಾರಿಗೆ ತಂದಿರುವ “ಮುದ್ರಾ ಬ್ಯಾಂಕ್‌’ ಬಗ್ಗೆ ರಾಜ್ಯದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ಇದೇ ತಿಂಗಳ 25ರಿಂದ ಅ.2ರವರೆಗೆ ಒಂದು ವಾರ ಕಾಲ ಪಕ್ಷದ ಸಂಸದರು, ಶಾಸಕರು ಹಾಗೂ ಮುಖಂಡರಿಗೆ ಮುದ್ರಾ ಬ್ಯಾಂಕ್‌ ಕುರಿತ ಎಲ್ಲ ವಿವರಗಳನ್ನು ನೀಡಲು ಉದ್ದೇಶಿಸಲಾಗಿದೆ.

ಅ.3ರಿಂದ ಮತ್ತೆ ರೈತ ಚೈತನ್ಯ ಯಾತ್ರೆ

ಮೊದಲ ಹಂತದ ರೈತ ಚೈತನ್ಯ ಯಾತ್ರೆಗೆ ಲಭಿಸಿರುವ ಜನಬೆಂಬಲದಿಂದ ಉತ್ತೇಜಿತಗೊಂಡಿರುವ ಬಿಜೆಪಿ ಇದೀಗ 2ನೇ ಹಂತದ ರೈತ ಚೈತನ್ಯ ಯಾತ್ರೆ ನಡೆಸಲು ತೀರ್ಮಾನಿಸಿದೆ. ಬರುವ ಅ.3ರಿಂದ 11ರವರೆಗೆ ಈ ಯಾತ್ರೆ ನಡೆಯಲಿದ್ದು, ರಾಜ್ಯದ ವಿವಿಧೆಡೆ ಸುಮಾರು 50 ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
-ಉದಯವಾಣಿ

Write A Comment