ಕರ್ನಾಟಕ

ದೇವರಾಜ ಅರಸು ಶತಮಾನೋತ್ಸವ: ಶ್ರೀರಾಮ ಆದರ್ಶ ವ್ಯಕ್ತಿಯಲ್ಲ: ಪ್ರೊ.ಭಗವಾನ್

Pinterest LinkedIn Tumblr

bhagavanಬೆಂಗಳೂರು, ಸೆ. 27: ರಾಮಾಯಣದ ನಾಯಕ ಶ್ರೀರಾಮ ಆತ್ಮಹತ್ಯೆಗೆ ಶರಣಾಗಿದ್ದು, ಆತನನ್ನು ನಿಷ್ಠೆಯಿಂದ ಆರಾಧಿಸುವವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಕನ್ನಡ ಕ್ರಿಯಾ ಸಮಿತಿ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಶತಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಮಾಯಣದ ಶ್ರೀರಾಮ ಎಂದಿಗೂ ಆದರ್ಶವ್ಯಕ್ತಿಯಲ್ಲ. ಅವನನ್ನು ನಂಬಿ ಪೂಜಿಸುವವರೂ ಆತ್ಮಹತ್ಯೆಗೆ ಶರಣಾಗಲಿದ್ದಾರೆ. ನಮ್ಮ ರೈತರು ರಾಮನನ್ನು ನಿಷ್ಠೆಯಿಂದ ಪೂಜಿಸುತ್ತಾರೆ. ಅದಕ್ಕಾಗಿಯೇ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ದೇಶದಲ್ಲಿಂದು ಹೆಚ್ಚಾಗಿವೆ ಎಂದು ಅವರು ವಿಶ್ಲೇಷಿಸಿದರು.

ಶ್ರೀರಾಮ ತನ್ನ ಪತ್ನಿಯನ್ನೇ ಅಗ್ನಿ ಪ್ರವೇಶಿಸುವಂತೆ ಮಾಡಿದ. ರಾಮ ಮಹಿಳೆಯರು ಹಾಗೂ ಶೂದ್ರರ ವಿರೋಧಿ. ಸಮಾಜದ ಶೇ.98 ಜನರ ವಿರೋಧಿಯೂ ಆಗಿದ್ದ ರಾಮ, ಹೇಗೆ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಶ್ರೀರಾಮನ ಕಾಲದಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿತ್ತು. ಈ ವ್ಯವಸ್ಥೆಯಿಂದ ಸಾವಿರಾರು ವರ್ಷಗಳ ಕಾಲ ಹೊರಬರಲು ಸಾಧ್ಯವಾಗಿಲ್ಲ ಎಂದರು. ಶಂಕರಾಚಾರ್ಯ, ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯ ಅಜ್ಞಾನಿಗಳಾಗಿದ್ದರು ಎಂದು ಆರೋಪಿಸಿದ ಪ್ರೊ.ಭಗವಾನ್, ದೇವರನ್ನು ನಂಬುವುದು ಮೂಢನಂಬಿಕೆಯ ಪರಮಾವಧಿ. ಇಂತಹ ನಾಯಕರು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದರು.

ಭಗವಾನ್ ಬುದ್ಧ ಏಳು ವರ್ಷ ಕಠಿಣ ತಪಸ್ಸು ಮಾಡಿದ್ದ. ಬುದ್ಧನಿಗಿಂತ ರಾಮನೆ ಶ್ರೇಷ್ಠ ಎಂದು ಬಿಂಬಿಸುವ ಉದ್ದೇಶದಿಂದಲೇ ರಾಮಾಯಣದಲ್ಲಿ ರಾಮ ಹದಿನಾಲ್ಕು ವರ್ಷ ವನವಾಸ ಅನುಭವಿಸಿದ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಬಲಪಂಥೀಯರೆಂದು ಹೇಳಿಕೊಳ್ಳುವ ಕೆಲವರು ವ್ಯಾಸ, ವಾಲ್ಮೀಕಿ ಬರೆದ ಮಹಾ ಭಾರತ, ರಾಮಾಯಣ ಮೂಲ ಗ್ರಂಥಗಳನ್ನೇ ಓದಿಲ್ಲ. ಮೂಲ ಗ್ರಂಥಗಳಿಂದ ಸಣ್ಣ, ಸಣ್ಣ ಕಥೆಗಳಾಗಿ ಬರೆದ ಪುಸ್ತಕ ಓದಿಕೊಂಡು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೇವರನ್ನು ನಂಬಿದ ಯಾರೂ ಉದ್ಧಾರವಾಗಿಲ್ಲ ಎಂದ ಅವರು, ದೇವರ ಹೆಸರಿನ ಹಿಂದಿರುವ ವಿಚಾರಗಳು ಭಯಾನಕವಾಗಿದ್ದು, ದೇವರನ್ನು ನಂಬದೇ ಜಾತಿ ವ್ಯವಸ್ಥೆ ತೊಲಗಿಸಲು ಹೋರಾಟ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ಧನನ್ನು ಪೂಜಿಸಬೇಕೆಂದು ಅವರು ಸಲಹೆ ಮಾಡಿದರು.

ರಾಮರಾಜ್ಯ ಅಗತ್ಯವಿಲ್ಲ:  ಸಮಾಜದಲ್ಲಿ ಜಾತಿ ವ್ಯವಸ್ಥೆ ಹುಟ್ಟುಹಾಕಿ, ಕೆಳವರ್ಗಗಳನ್ನು ತುಳಿದ ಶ್ರೀರಾಮನನ್ನು ಇಂದು ಆದರ್ಶನಂತೆ ಪೂಜಿಸುತ್ತಿದ್ದೇವೆ. ಆದರೆ, ನಮಲ್ಲಿ ಸಮಾನತೆಗಾಗಿ ಹೋರಾಡಿದ ಡಾ.ಅಂಬೇಡರ್ ಭಾವಚಿತ್ರವಿಲ್ಲ. ರಾಮನ ಫೋಟೊ ಕಿತ್ತೊಗೆಯಿರಿ. ನಮಗೆ ಶ್ರೀರಾಮ ಆಳಿದ ರಾಮರಾಜ್ಯ ಅಗತ್ಯವಿಲ್ಲ ಎಂದು ಭಗವಾನ್ ಹೇಳಿದರು.

ಸತ್ಯಕ್ಕಿದು ಕಾಲವಲ್ಲ:  ಎಂಟನೆ ಶತಮಾನದಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ ಬ್ರಾಹ್ಮಣ, ವೈದಿಕ ಧರ್ಮವನ್ನು ಭದ್ರಮಾಡಿದವರು. ಸಮಾಜದಲ್ಲಿನ ಬ್ರಾಹ್ಮಣರೇತರರನ್ನು ತುಳಿದಿರುವ ಇವರು ಅನ್ಯ ಮತ ದ್ವೇಷಿಗಳು. ಮಾತ್ರವಲ್ಲ, ಮಾನವ ದ್ವೇಷಿಗಳು. ಇವರೆಲ್ಲ ಗೂಂಡಾಗಿರಿ ಮಾಡುತ್ತಿದ್ದರು. ನಾನು ಹೇಳಿರುವ ಎಲ್ಲ ಅಂಶಗಳು ಸತ್ಯವಾಗಿದ್ದು, ಸತ್ಯ ಹೇಳಿದವರಿಗಿದು ಒಳ್ಳೆಯ ಕಾಲವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವೇದಗಳನ್ನು ಬೆಂಕಿಗೆ ಹಾಕಿ: ಹಿಂದೂಧರ್ಮ, ಶಾಸ್ತ್ರ, ಪುರಾಣಗಳು ಸಮಾಜದಲ್ಲಿನ ಶೂದ್ರರನ್ನು ತುಳಿದಿವೆ. ಜಾತಿ ವ್ಯವಸ್ಥೆ ಬೇಕಿರುವುದು ಮೇಲ್ವರ್ಗದ ಬ್ರಾಹ್ಮಣರಿಗೆ ಮಾತ್ರ. ಜನ ಅವಿವೇಕಿಗಳಾಗಿದ್ದು, ಆಲೋಚನೆ ಮಾಡದ ಕೆಲವರು ಹಿಂದೂಗಳು ಹೇಳಿದ್ದಕ್ಕೆ ತಲೆ ತೂಗಿಸುವಂತಾಗಿದೆ ಎಂದ ಅವರು, ಹಿಂದೂಧರ್ಮದ ವೇದ, ಶಾಸ್ತ್ರಗಳನ್ನು ಸುಟ್ಟುಹಾಕಬೇಕೆಂದು ನುಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಅಂತರ್ಜಾತಿ ವಿವಾಹ ಕಡ್ಡಾಯವಾಗಲಿ.
ಯುವ ಪೀಳಿಗೆ ಅಂತರ್ಜಾತಿ ವಿವಾಹಕ್ಕೆ ಮುಂದಾದಲ್ಲಿ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ. ಹೀಗಾಗಿ ಸರಕಾರ ಈ ಬಗ್ಗೆ ಕಾಯ್ದೆ ರಚನೆಗೆ ಮುಂದಾಗಬೇಕು. ಚುನಾವಣೆಗೆ ಸ್ಪರ್ಧಿಸುವ, ಸರಕಾರಿ ಉದ್ಯೋಗಾಕಾಂಕ್ಷಿಗಳು, ಸರಕಾರದ ಯೋಜನೆ ಫಲಾನುಭವಿಗಳಿಗೆ ಅಂತರ್ಜಾತಿ ವಿವಾಹ ಕಡ್ಡಾಯಗೊಳಿಸುವುದು ಸೂಕ್ತ.
-ಪ್ರೊ.ಕೆ.ಎಸ್.ಭಗವಾನ್, ವಿಚಾರವಾದಿ

Write A Comment