ಕರ್ನಾಟಕ

ದೇಜಗೌ ಕನ್ನಡ ಸಾಹಿತ್ಯದ ಭೀಷ್ಮ: ಡಾ.ವೀರಪ್ಪ ಮೊಯ್ಲಿ

Pinterest LinkedIn Tumblr

javaregowda_ಬೆಂಗಳೂರು, ಸೆ. 27: ಕನ್ನಡ ಸಾಹಿತ್ಯಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟು, ಸಾಹಿತ್ಯ ಉನ್ನತಿಗಾಗಿ ಶ್ರಮಿಸಿದ ಹಿರಿಯ ಸಾಹಿತಿ ದೇಜಗೌ ಅವರು ಕನ್ನಡ ಸಾಹಿತ್ಯದ ಭೀಷ್ಮ ಎಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಲೇಖಕ ಡಾ.ಎಂ.ವೀರಪ್ಪ ಮೊಯ್ಲಿ ಶ್ಲಾಘಿಸಿದ್ದಾರೆ.

ರವಿವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕುವೆಂಪು ಕಲಾ ನಿಕೇತನ ಸಂಸ್ಥೆ ಏರ್ಪಡಿಸಿದ್ದ ಶತಾಯುಷಿ ಕರ್ನಾಟಕ ರತ್ನ ದೇಜಗೌ ಗೌರವ ಸಮರ್ಪಣೆ ಮತ್ತು ಕುವೆಂಪು ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕ್ಷೇತ್ರದ ವೌಲ್ಯಗಳನ್ನು ಜನರಿಗೆ ಸಾರಿದ ಸಂಶೋಧಕರಾಗಿ, ಜನಪದ ಸಾಹಿತ್ಯದ ಸಂರಕ್ಷಣೆ ಹಾಗೂ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಜವರೇಗೌಡ ಅವರು, ಜನಪದದ ಗಣಿ ಮಾತ್ರವಲ್ಲ, ಜನಪದ ವಸ್ತುಗಳ ಸಂಗ್ರಹಾಲಯಕ್ಕಾಗಿ ತಮ್ಮ ಪತ್ನಿಯ ಆಭರಣಗಳನ್ನು ಮಾರಿದ್ದರೆಂಬುದು ನಿಜಕ್ಕೂ ಮಾದರಿ ಎಂದು ಮೊಯ್ಲಿ ತಿಳಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ದೇಜಗೌ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶವಿಲ್ಲವೆಂಬ ಸುಪ್ರೀಂ ಕೋರ್ಟ್ ತೀರ್ಪುನಿಂದ ಕನ್ನಡ ಭಾಷೆ ಅವನತಿಯತ್ತ ಮುಖ ಮಾಡಲಿದೆ. ಆದುದರಿಂದ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಉಳಿವಿಗೆ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕೆಂದು ಆಗ್ರಹಿಸಿದರು.

ಕನ್ನಡಿಗರ ಅಗ್ರಮಾನ್ಯ ಸಂಸ್ಥೆಯಾಗಿರುವ ಕಸಾಪ ಈ ವಿಚಾರದಲ್ಲಿ ಮುಂದೆ ಹೆಜ್ಜೆ ಇಡಬೇಕು. ಕನ್ನಡ ಭಾಷೆ, ಸಾಹಿತ್ಯದ ಉಳಿವಿಗಾಗಿ ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯಾಭಿಮಾನಿಗಳು ಜಾಗೃತರಾಗಬೇಕು ಎಂದು ದೇಜಗೌ ಇದೇ ವೇಳೆ ಮನವಿ ಮಾಡಿದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ್ದರೂ, ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಆದರೆ, ಕೇಂದ್ರ ಸರಕಾರ ತಮಿಳುಭಾಷೆಗೆ ಸುಮಾರು 60 ಕೋಟಿ ರೂ.ಅನುದಾನ ನೀಡಿದೆ ಎಂದ ಅವರು, ಕನ್ನಡಕ್ಕೂ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ನೆರವಾಗಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಡಾ.ಸೂಲಗಿತ್ತಿ ನರಸಮ್ಮ, ನಾಗತಿಹಳ್ಳಿ ರಮೇಶ್, ಅಶ್ವಿನಿ ಅಂಗಡಿಗೆ ವಿಶ್ವ ಮಾನವ ಕುವೆಂಪು ಉದಯ ರವಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಡಾ.ಸಿ.ಪಿ.ಕೃಷ್ಣಮೂರ್ತಿ ರಚಿಸಿರುವ ‘ಶತಮಾನದ ಶಾರದೆಗೆ’ ಎಂಬ ಕೃತಿಯನ್ನು ಪ್ರೊ.ಕೆ.ಭೈರವಮೂರ್ತಿ ಲೋಕಾರ್ಪಣೆ ಮಾಡಿದರು.

ದೇಜಗೌ ಅವರ ಗೌರವಾರ್ಪಣೆ ಅಂಗವಾಗಿ ಕಾರ್ಯಕ್ರಮದಲ್ಲಿ ನೂರು ಮಂದಿ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು. ಸಾಹಿತಿಗಳಾದ ಡಾ.ಸಿಪಿಕೆ, ಡಾ. ಟಿ.ಕೆ.ಕೆಂಪೇಗೌಡ, ಕವಯಿತ್ರಿ ಡಾ.ಲತಾ ರಾಜಶೇಖರ್, ಅಪ್ಪಗೆರೆ ತಿಮ್ಮರಾಜು, ಕುವೆಂಪು ಕಲಾನಿಕೇತನ ಅಧ್ಯಕ್ಷ ಡಿ.ಪ್ರಕಾಶ್ ಉಪಸ್ಥಿತರಿದ್ದರು.

Write A Comment