ಕರ್ನಾಟಕ

ಜೀತ ನಿವಾರಣೆ ಗ್ರಾಮ ಪಂಚಾಯಿತಿ ಹೊಣೆ

Pinterest LinkedIn Tumblr

jeeeetataa_0ಬೆಂಗಳೂರು: ‘ಜೀತಪದ್ಧತಿ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಇನ್ನೂ ಹೆಚ್ಚಿನ ನಿಗಾವಹಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಅದನ್ನು ತಡೆಯುವ ಕೆಲಸ ಮಾಡಬೇಕು’ ಎಂದು ಗ್ರಾಮೀಣಾಭಿವೃದ್ಧಿ  ಸಚಿವ ಎಚ್.ಕೆ.ಪಾಟೀಲ  ಇಲ್ಲಿ ತಿಳಿಸಿದರು.

ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್‌ ನೇತೃತ್ವದ ‘ಜೀತ ಪದ್ಧತಿ ಪರಿಶೀಲನಾ ಸಮಿತಿ’ ಕೊಟ್ಟ ವರದಿ ಸ್ವೀಕರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಗ್ರಾಮಗಳ ವ್ಯಾಪ್ತಿಯಲ್ಲಿ ಜೀತಪದ್ಧತಿ ಇಲ್ಲದಂತೆ ನೋಡಿಕೊಳ್ಳುವುದು  ಗ್ರಾಮ ಪಂಚಾಯಿತಿಯ ಜವಾಬ್ದಾರಿ ಎಂದು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಗಳು ಇನ್ನೂ ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡುವ ಹಾಗೆ ಮಾಡಲಾಗುವುದು’ ಎಂದು ಅವರು ಹೇಳಿದರು.

ಪುನರ್ವಸತಿ ಆಗಿಲ್ಲ: ಜೀತಪದ್ಧತಿ ವಿಮೋಚನಾ ಕಾಯ್ದೆ ಜಾರಿಗೆ ಬಂದ ನಂತರ 15 ಸಾವಿರಕ್ಕೂ ಹೆಚ್ಚು ಜೀತದಾಳುಗಳನ್ನು ವಿಮೋಚನೆ ಮಾಡಲಾಗಿದೆ. ಇವರ ಪೈಕಿ ಇನ್ನೂ 755 ಮಂದಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಿಲ್ಲ ಎಂದು ಸಮಿತಿ ಅಧ್ಯಕ್ಷ ಶಿವಾಜಿ ಗಣೇಶನ್‌ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು , ‘ಇನ್ನೆರಡು  ತಿಂಗಳಲ್ಲಿ ಇವರಿಗೆಲ್ಲ ಪುನರ್ವಸತಿ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
*
ಪರಿಶೀಲನಾ ಸಮಿತಿ ಗಮನಿಸಿದ್ದು

* ಜೀತಪದ್ಧತಿಯ ಸ್ವರೂಪ ಬದಲಾಗಿದೆ
* ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳೇ ಹೆಚ್ಚಾಗಿ ಜೀತಕ್ಕೆ ದುಡಿಯುತ್ತಿವೆ. ಇವರಲ್ಲಿ ಎಲ್ಲಾ ವಯೋಮಾನದವರೂ ಇದ್ದಾರೆ
* ನಗರದಲ್ಲಿರುವ ಸಿದ್ಧ ಉಡುಪು ತಯಾರಿಸುವ ಉದ್ದಿಮೆ, ಪಾನಿಪುರಿ ಮಾರಾಟ ಮತ್ತಿತರ ಕೆಲಸಗಳಿಗೆ ವಲಸಿಗರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದೆ
* ಜೀತ ಪದ್ಧತಿ ಅಸ್ತಿತ್ವದಲ್ಲಿದ್ದರೂ ಅದನ್ನು ಒಪ್ಪಲು ಅಧಿಕಾರಿಗಳು ಸಿದ್ಧರಿಲ್ಲ
* ಜೀತ ನಿರ್ಮೂಲನಾ ಕಾಯ್ದೆಯ ಪ್ರಕಾರ ಮೂರು ವರ್ಷಗಳಿಗೊಮ್ಮೆ ಜೀತದಾಳುಗಳ ಸಮೀಕ್ಷೆ ನಡೆಯಬೇಕು
*
ಸಮಿತಿಯ ಶಿಫಾರಸುಗಳು
* ಜೀತ ಕಂಡು ಬಂದರೆ ಜಿಲ್ಲಾಧಿಕಾರಿಯನ್ನೇ ಹೊಣೆ ಮಾಡಬೇಕು
* ಜಿಲ್ಲಾ ಮಟ್ಟದ ಜಾಗೃತ ಸಮಿತಿಗಳಿಗೆ ಕಾಳಜಿ ಇರುವವರನ್ನು ನೇಮಿಸಬೇಕು
* ಕಾಲಮಿತಿಯಲ್ಲಿ ಪುನರ್‌ವಸತಿ ಕಲ್ಪಿಸಬೇಕು
* ಜೀತ ನಿರ್ಮೂಲನೆ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶ ಇರಬೇಕು

* * *
ಬಿಟ್ಟಿ ಚಾಕರಿಯೂ ಜೀತ
ಬಿಟ್ಟಿ ಚಾಕರಿ ಎಂಬುದು ಜೀತ ಪದ್ಧತಿಯ ಇನ್ನೊಂದು ರೂಪ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಪದ್ಧತಿ ಇದೆ. ಬಿಟ್ಟಿ ಚಾಕರಿ ಮಾಡಿಸಿಕೊಳ್ಳುವವರ ವಿರುದ್ಧವು ಜೀತ ಪದ್ಧತಿ ವಿಮೋಚನೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.

Write A Comment