ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಪದವೀಧರರಿಗೆ ಪ್ರಥಮ ಮತ್ತು ದ್ವಿತೀಯದರ್ಜೆ ಸಹಾಯಕರ (ಎಫ್‌ಡಿಎ, ಎಸ್‌ಡಿಎ) ನೇಮಕಾತಿ ಪರೀಕ್ಷೆ ಬರೆಯಲು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಷರತ್ತುಬದ್ಧ ಅನುಮತಿ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ ಶುಕ್ರವಾರ ತಿಳಿಸಿದರು.
ಎಫ್‌ಡಿಎ, ಎಸ್‌ಡಿಎ ನೇಮಕಾತಿ ಪರೀಕ್ಷೆಗೆ ಕೆಎಸ್‌ಒಯು ಅಭ್ಯರ್ಥಿಗಳಿಗೆ ಅವಕಾಶ ಕೋರಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ ಕೆಎಸ್‌ಒಯು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ದಾಖಲೆ ಪರಿಶೀಲನೆ ವೇಳೆಗೆ ಕೆಎಸ್ಒಯು ಮಾನ್ಯತೆಯು ಪೂರ್ವಾನ್ವಯವಾಗುವಂತೆ ನವೀಕರಣಗೊಂಡಿದ್ದರೆ ಮಾತ್ರ ಆಯ್ಕೆಯಾದ ಕೆಎಸ್‌ಒಯು ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುವುದು ಎಂದು ಷರತ್ತುಬದ್ಧ ಅನುಮತಿ ನೀಡಿದ್ದಾರೆ ಎಂದರು.
ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೂ ಕೆಎಸ್‌ಒಯು ಅಭ್ಯರ್ಥಿಗಳಿಗೂ ಬರೆಯಲು ಅವಕಾಶ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಯುಕ್ತ ಚಕ್ರವರ್ತಿ ಮೋಹನ್ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ. ಪರೀಕ್ಷೆಗೆ ಅವಕಾಶ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಧುಸೂದನ್ ಹೇಳಿದರು.