ಕರ್ನಾಟಕ

ಲೋಕಾಯುಕ್ತ ಲಂಚ ಪ್ರಕರಣ: 2ನೆ ಪ್ರಕರಣದಲ್ಲಿ ಅಶ್ವಿನ್ ಮೊದಲ ಆರೋಪಿ

Pinterest LinkedIn Tumblr

Ashwin-Rao_ಬೆಂಗಳೂರು, ಸೆ.25: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣದ 2ನೆ ದೂರಿನ ಆರೋಪ ಪಟ್ಟಿಯನ್ನು ವಿಶೇಷ ತನಿಖಾ ದಳ(ಎಸ್‌ಐಟಿ)ದ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಸಿದ್ದು, ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಮೊದಲ ಆರೋಪಿ ಯಾಗಿದ್ದಾರೆ.
ಭದ್ರಾ ಮೇಲ್ದಂಡೆಯ ಎಂಜಿನಿಯರ್ ಚನ್ನಬಸಪ್ಪ ದಾಖಲಿಸಿರುವ 2ನೆ ದೂರಿನ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಆರೋಪ ಪಟ್ಟಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬೋಪಯ್ಯ ಅವರಿಗೆ ಗುರುವಾರ ಸಲ್ಲಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿರುವ 1,572ಪುಟಗಳ ಆರೋಪ ಪಟ್ಟಿಯಲ್ಲಿ ಅಶ್ವಿನ್‌ರನ್ನು ಮೊದಲ ಆರೋಪಿಯನ್ನಾಗಿಸಿದ್ದು, ವಿ.ಭಾಸ್ಕರ್, ಅಶೋಕ್ ಕುಮಾರ್ ಹಾಗೂ ಲೋಕಾಯುಕ್ತ ಸಂಸ್ಥೆಯಿಂದ ಅಮಾನತುಗೊಂಡಿರುವ ಪಿಆರ್‌ಒ ಸೈಯದ್ ರಿಯಾಝ್ ಉಳಿದ ಮೂವರು ಆರೋಪಿಗಳಾಗಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯ ಗುರುವಾರ ಹಾಗೂ ಶುಕ್ರವಾರ ರಜೆಯಿದ್ದ ಕಾರಣ ಎಸ್‌ಐಟಿ ಅಧಿಕಾರಿಗಳು ತ್ವರಿತವಾಗಿ ಆರೋಪ ಪಟ್ಟಿಯನ್ನು ಸಲ್ಲಿಸಲು ನ್ಯಾಯಾಧೀಶ ಬೋಪಯ್ಯ ಅವರ ಮನೆಗೆ ತೆರಳಿ ಸಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ವೈ.ಭಾಸ್ಕರ್ ರಾವ್ ಸೇರಿದಂತೆ 120 ಸಾಕ್ಷಿಗಳ ವಿವರಗಳನ್ನು ನೀಡಲಾಗಿದ್ದು, ಚನ್ನಬಸಪ್ಪ ಅವರೊಂದಿಗೆ ಆರೋಪಿಗಳು ಮಾತನಾಡಿದ ದೂರವಾಣಿ ಸಂಭಾಷಣೆಯ ವಿವರಗಳು, ಚನ್ನಬಸಪ್ಪರನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದ ವಿವರಗಳು, ಸ್ಟಾರ್ ಹೊಟೇಲ್‌ಗಳ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಮಾನ ಟಿಕೆಟ್‌ಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ.

Write A Comment