ಕರ್ನಾಟಕ

ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ; ಎರಡನೆಯ ಆರೋಪಪಟ್ಟಿ ಸಲ್ಲಿಕೆ

Pinterest LinkedIn Tumblr

ashಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) 1,600 ಪುಟಗಳ ಎರಡನೆಯ ದೋಷಾರೋಪ ಪಟ್ಟಿ ಸಲ್ಲಿಸಿದೆ. ಲೋಕಾಯುಕ್ತ ವೈ. ಭಾಸ್ಕರ ರಾವ್ ಮಗ ಅಶ್ವಿನ್ ರಾವ್ ಪ್ರಮುಖ ಆರೋಪಿ ಎಂದು ಇದರಲ್ಲಿ ಹೇಳಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಬಿ. ಚೆನ್ನಬಸಪ್ಪ ಅವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಇದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಅಶ್ವಿನ್‌ ಮತ್ತು ಇತರ ಮೂವರ ವಿರುದ್ಧ ಆರೋಪ ಹೊರಿಸಲಾಗಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಜಿ. ಬೋಪಯ್ಯ ಅವರ ನಿವಾಸಕ್ಕೆ ತೆರಳಿ ಇದನ್ನು ಸಲ್ಲಿಸಲಾಯಿತು. ಅಶೋಕ್‌ ಕುಮಾರ್, ವಿ. ಭಾಸ್ಕರ್‌ ಅಲಿಯಾಸ್ ‘420 ಭಾಸ್ಕರ್’, ಈಗ ಅಮಾನತಿನಲ್ಲಿರುವ ಲೋಕಾಯುಕ್ತ ಜಂಟಿ ಆಯುಕ್ತ (ಸಾರ್ವಜನಿಕ ಸಂಪರ್ಕ) ಸೈಯದ್ ರಿಯಾಜ್ ಅವರು ಪ್ರಕರಣದ ಇತರ ಆರೋಪಿಗಳು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಅಶ್ವಿನ್‌ ಮತ್ತು ರಿಯಾಜ್‌ ನೀಡಿದ ಸೂಚನೆ ಆಧರಿಸಿ, ಅಶೋಕ್‌ ಕುಮಾರ್‌ ಮತ್ತು ಭಾಸ್ಕರ್‌ ಅವರು ಚೆನ್ನಬಸಪ್ಪ ಅವರಿಂದ ₹ 20 ಲಕ್ಷ ಲಂಚ ಕೇಳಿದರು. ಚೆನ್ನಬಸಪ್ಪ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಪ್ರಕರಣ ಕೈಬಿಡಲು ಈ ಹಣ ಕೇಳಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ದೂರು ಏನಿತ್ತು?: ‘ನನ್ನ ವಿರುದ್ಧ ಲೋಕಾಯುಕ್ತದಲ್ಲಿರುವ ಪ್ರಕರಣವನ್ನು ಅಶ್ವಿನ್ ಮೂಲಕ ರದ್ದು ಮಾಡಿಸುವುದಾಗಿ ಹೇಳಿದ್ದ ಹಾವೇರಿ ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ಸಂಚಾಲಕ ಶಿವಯೋಗಿ ಹಿರೇಮಠ ಅವರ ಜೊತೆ ನಾನು ಹೈದರಾಬಾದ್‌ಗೆ ಹೋದೆ. ಅಲ್ಲಿ ಭಾಸ್ಕರ್‌, ಹಿರೇಮಠ ಮತ್ತು ಅಶೋಕ್‌ ಕುಮಾರ್‌ ಅವರು ನನಗೆ ವ್ಯಕ್ತಿಯೊಬ್ಬರನ್ನು ಪರಿಚಯಿಸಿ, ಇವರು ಅಶ್ವಿನ್‌ ಎಂದು ಹೇಳಿದರು. ನಿಮ್ಮ ಸಮಸ್ಯೆ ಪರಿಹರಿಸುವೆ ಎಂದು ಅಶ್ವಿನ್‌ ಹೇಳಿದ್ದರು’ ಎಂಬುದು ಚೆನ್ನಬಸಪ್ಪ ನೀಡಿದ್ದ ದೂರು.

‘ನಾನು ಹೈದರಾಬಾದ್‌ನಿಂದ ವಾಪಸ್ ಬಂದ ನಂತರ, ಪ್ರಕರಣ ರದ್ದು ಮಾಡಲು ಅಶೋಕ್‌ ಮತ್ತು ಭಾಸ್ಕರ್ ಅವರು 20 ಲಕ್ಷ ಕೇಳುತ್ತಿದ್ದಾರೆ ಎಂದು ಹಿರೇಮಠ ಹೇಳಿದರು’ ಎಂದು ಚೆನ್ನಬಸಪ್ಪ ದೂರಿನಲ್ಲಿ ಆರೋಪಿಸಿದ್ದಾರೆ. ₹ 20 ಲಕ್ಷ ಬೇಕಿರುವುದು ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಚೆನ್ನಬಸಪ್ಪ ಅವರು ಅಶ್ವಿನ್ ಅವರಿಗೆ ಕರೆ ಮಾಡಿದ್ದರು. ‘ಹಿರೇಮಠ ಹೇಳಿದಂತೆ ಮಾಡಿ’ ಎಂದು ಅಶ್ವಿನ್ ಅವರು ಚೆನ್ನಬಸಪ್ಪ ಅವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
*
ಶ್ಯಾಮ್ ಭಟ್ ವಿಚಾರಣೆ
ಬೆಂಗಳೂರು: ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಟಿ. ಶ್ಯಾಮ್ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಭಟ್ ಅವರನ್ನು ಸಿಐಡಿ ಕಚೇರಿಗೆ ಕರೆಸಿದ ಎಸ್‌ಐಟಿ ಅಧಿಕಾರಿಗಳಾದ ಸೌಮೇಂದು ಮುಖರ್ಜಿ ಮತ್ತು ಲಾಬು ರಾಮ್ ಅವರು ಮೂರು ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.

ಜಮೀನು ವ್ಯಾಜ್ಯದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಅಶ್ವಿನ್ ಮತ್ತು ರಿಯಾಜ್ ಅವರು ಭಟ್‌ ಅವರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಈ ಸಂಬಂಧ ಭಟ್‌ ಅವರಿಂದ ಮಾಹಿತಿ ಪಡೆಯಲಾಗಿದೆ. ಅವರ ಹೇಳಿಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment