ಬೆಂಗಳೂರು: ಇದೇ ನವೆಂಬರ್ 23 ರಿಂದ 25ರವರೆಗೆ ನಡೆಯಬೇಕಿದ್ದ ಜಾಗ ತಿಕ ಹೂಡಿಕೆದಾರರ ಸಮಾವೇಶವನ್ನು 2016ರ ಫೆಬ್ರುವರಿ 3ರಿಂದ 5ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಬರ ಇರುವ ಕಾರಣ ಈ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಸುದ್ದಿಗಾರರಿಗೆ ತಿಳಿಸಿದರು.
ಬರಕ್ಕೂ ಹೂಡಿಕೆದಾರರ ಸಮಾವೇಶಕ್ಕೂ ಏನು ಸಂಬಂಧ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ರಾಜ್ಯದಲ್ಲಿ ಬರ ಇದ್ದಾಗ ಇಂತಹ ಕಾರ್ಯಕ್ರಮಆಯೋಜಿಸುವುದು ಬೇಡ ಎಂಬುದು ನಮ್ಮ ಅಭಿಪ್ರಾಯ. ಈ ಕಾರಣದಿಂದ ಸಮಾವೇಶವನ್ನು ಮುಂದಕ್ಕೆ ಹಾಕಿ ದ್ದೇವೆ’ ಎಂದು ಅವರು ಹೇಳಿದರು.
‘ಸರಿಯಾದ ಸಿದ್ಧತೆ ಇಲ್ಲದ ಕಾರಣಕ್ಕೆ ಸಮಾವೇಶ ಮುಂದೂಡಲಾಗಿದೆ ಎಂಬುದು ಶುದ್ಧ ಸುಳ್ಳು. ಎಲ್ಲ ರೀತಿಯ ತಯಾರಿ ನಡೆದಿತ್ತು. ಈ ವಿಷಯದಲ್ಲಿ ಅನುಮಾನವೇ ಬೇಡ. ಅನೇಕ ಕಡೆ ರೋಡ್ ಶೋಗಳನ್ನೂ ನಡೆಸಲಾಗಿತ್ತು. ದೆಹಲಿಯಲ್ಲೂ ಅಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತು’ ಎಂದರು.
ಹಿರೋ ಮತ್ತೆ ರಾಜ್ಯಕ್ಕೆ: ಆಂಧ್ರಪ್ರದೇಶಕ್ಕೆ ಹೋಗಿರುವ ಹೀರೊ ಮೋಟರ್್ಸ ಕಂಪೆನಿಯನ್ನು ರಾಜ್ಯಕ್ಕೆ ಮತ್ತೆ ಕರೆತರುವ ಪ್ರಯತ್ನ ನಡೆದಿದೆ. ಹೀರೊ ಮೋಟರ್ಸ್ ಮಾಲೀಕರು ನನ್ನ ಸ್ನೇಹಿತರು. ಅವರ ಭೇಟಿಗೆ ಪ್ರಯತ್ನ ನಡೆದಿದೆ. ಅವರು ಆಂಧ್ರಕ್ಕೆ ಹೋದರೂ ಅಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ’ ಎಂದರು.
ಉದ್ಯಮ ಸ್ನೇಹಿ ಪಟ್ಟಿ ಪರಿಶೀಲಿಸಿ
ಇತ್ತೀಚೆಗೆ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕು ಎಂದು ಬೃಹತ್ ದೇಶಪಾಂಡೆ ಬುಧವಾರ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.
‘ಸೋಮವಾರ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಇದನ್ನು ಪೂರ್ಣ ಒಪ್ಪಲು ಸಾಧ್ಯ ಇಲ್ಲ’ ಎಂದು ತಿಳಿಸಿದರು.
ಉದ್ಯಮ ಸ್ನೇಹಿ ಪಟ್ಟಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಸಿಕ್ಕಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 142ನೇ ಸ್ಥಾನ ಲಭಿಸಿದೆ. ಅದರ ಬಗ್ಗೆ ಏನಂತೀರಾ? ಎಂದೂ ಅವರು ಪ್ರಶ್ನಿಸಿದರು.