ರಾಷ್ಟ್ರೀಯ

ಇಂದಿರಾ ಭಾವಚಿತ್ರದ ಅಂತರ್ದೇಶೀಯ ಪತ್ರವೂ ಸ್ಥಗಿತ

Pinterest LinkedIn Tumblr

indiraನವದೆಹಲಿ (ಪಿಟಿಐ): ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಅವರ ಭಾವಚಿತ್ರ ಇರುವ ಅಂಚೆಚೀಟಿಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಅಷ್ಟೆ ಅಲ್ಲದೆ  ಇಂದಿರಾ ಗಾಂಧಿ ಅವರ ಭಾವಚಿತ್ರವಿರುವ ಅಂತರ್ದೇಶೀಯ ಪತ್ರವೂ ಸ್ಥಗಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇಂದಿರಾ ಚಿತ್ರದ ಬದಲು ಅಂತರ್ದೇಶೀಯ ಪತ್ರದಲ್ಲಿ ಯೋಗದ ಚಿತ್ರವನ್ನು ಅಳವಡಿಸಲು ಅಂಚೆಚೀಟಿ ಸಲಹಾ ಸಮಿತಿ (ಪಿಎಸಿ)  ಶಿಫಾರಸು ಮಾಡಿದೆ.

‘ಆದರೆ ಆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ’ ಎಂದು ಸಂವಹನ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿದ್ದಾರೆ.

ಸರ್ಕಾರದ ಈ ನಡೆಯನ್ನು ಸಮರ್ಥಿಸಿಕೊಂಡಿರುವ ರವಿಶಂಕರ್‌ ಪ್ರಸಾದ್‌,  ‘ಅಂಚೆಚೀಟಿಯ ಗೌರವ ಕೇವಲ ಒಂದು ಕುಟುಂಬದವರಿಗೆ ಅಷ್ಟೆ ಅಲ್ಲದೆ ಆಧುನಿಕ ಭಾರತದ ನಿರ್ಮಾತೃಗಳಿಗೂ ಸಲ್ಲಬೇಕು’ ಎಂದಿದ್ದಾರೆ.

ಜವಾಹರ್‌ಲಾಲ್‌ ನೆಹರೂ, ಮಹಾತ್ಮ ಗಾಂಧಿ, ಅಂಬೇಡ್ಕರ್‌ ಹಾಗೂ ಮದರ್‌ ತೆರೇಸಾ ಅವರ ಅಂಚೆ ಚೀಟಿಗಳನ್ನು ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕಾಂಗ್ರೆಸ್‌ ಟೀಕೆ: ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌, ಬುಧವಾರ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

‘ಕೇಂದ್ರ ಸರ್ಕಾರದ ಈ ನಡೆ ಅದರ ಸಂಕುಚಿತ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಇತಿಹಾಸಕ್ಕೆ ಮಾಡಿದ ಅವಮಾನ’ ಎಂದು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಟೀಕಿಸಿದ್ದಾರೆ.

ಮುಂದಿನ ತಿಂಗಳಲ್ಲಿ ಹೊಸ ರೂಪದ ಅಂಚೆ ಚೀಟಿಗಳು ಮತ್ತು ಅಂಚೆ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಯಾರ ಹೆಸರಲ್ಲಿ ಅಂಚೆ ಚೀಟಿ?
ಹೊಸ ಪರಿಕಲ್ಪನೆಯ ಅಂಚೆಚೀಟಿಗಳು ಶ್ಯಾಂ ಪ್ರಸಾದ್‌ ಮುಖರ್ಜಿ, ದೀನ್‌ ದಯಾಳ್‌ ಉಪಾಧ್ಯಾಯ, ನೇತಾಜಿ ಸುಭಾಷ್‌ ಚಂದ್ರ ಬೋಸ್‌, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌, ಶಿವಾಜಿ, ಮೌಲಾನಾ ಆಜಾದ್‌, ಭಗತ್‌ ಸಿಂಗ್‌, ಜಯಪ್ರಕಾಶ್‌ ನಾರಾಯಣ್, ರಾಮ್‌ ಮನೋಹರ್‌ ಲೋಹಿಯಾ, ಸ್ವಾಮಿ ವಿವೇಕಾನಂದ, ಮಹಾರಾಣಾ ಪ್ರತಾಪ್‌ ಅವರ ಭಾವಚಿತ್ರಗಳನ್ನು ಒಳಗೊಂಡಿರುತ್ತವೆ.

Write A Comment