ಕರ್ನಾಟಕ

ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಹೂವು ಅಗ್ಗ: ಖರೀದಿ ಜೋರು

Pinterest LinkedIn Tumblr

market

ಬೆಂಗಳೂರು: ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಜನಜಂಗುಳಿ. ಪೂಜೆಗೆ ಭರ್ಜರಿ ಖರೀದಿ. ಎತ್ತ ನೋಡಿದರೂ ಹೂವು, ಹಣ್ಣು, ತಾಜಾ ತರಕಾರಿ ರಾಶಿ.ಇದು ನಗರದ ಮಾರುಕಟ್ಟೆಗಳಲ್ಲಿ ಬುಧವಾರ ಕಂಡುಬಂದ ಚಿತ್ರಣ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.

ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿಬಜಾರ್‌, ಜಯನಗರ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಕೆ.ಆರ್‌.ಮಾರುಕಟ್ಟೆ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ಪಾದಚಾರಿಗಳು ನಡೆದಾಡುವುದು ಕಷ್ಟ ಎನ್ನುವಂಥ ಸ್ಥಿತಿ ನಿರ್ಮಾಣವಾಗಿತ್ತು. ಇಡೀ ಮಾರುಕಟ್ಟೆ ಜನರಿಂದ ತುಂಬಿತ್ತು. ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆಯಿತು.

ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ಕನಕಾಂಬರ ಹೂವು, ಬಾಳೆಹಣ್ಣು ಹೊರತುಪಡಿಸಿ ಉಳಿದ ಎಲ್ಲ ಬಗೆಯ ಹೂವು, ಹಣ್ಣುಗಳ ಬೆಲೆ ಕಡಿಮೆ ಇದೆ. ಕನಕಾಂಬರ, ಸೇವಂತಿಗೆ ಹೂವು, ಕಾಕಡ, ಚೆಂಡು ಹೂವು ಮಾರುಕಟ್ಟೆಗೆ ಯಥೇಚ್ಛವಾಗಿ ಬಂದಿವೆ. ಸಗಟು ದರದಲ್ಲಿ ಹೂವು ಹಣ್ಣುಗಳ ಬೆಲೆ ಕಡಿಮೆ ಇದ್ದರೆ, ಚಿಲ್ಲರೆ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದರು. ಚಿಲ್ಲರೆ ಮಾರಾಟಗಾರರು ಒಂದು ಮೊಳ ಸೇವಂತಿಗೆಯನ್ನು ರೂ. 80ಕ್ಕೆ ಮಾರಾಟ ಮಾಡುತ್ತಿದ್ದುದು ಕಂಡು ಬಂತು.

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹೂವುಗಳ ಬೆಲೆ ತುಟ್ಟಿಯಾಗಿತ್ತು. ಆಗ ಒಂದು ಕೆ.ಜಿ. ಕನಕಾಂಬರ ಹೂವು ರೂ. 1700ರಿಂದ 2 ಸಾವಿರದವರೆಗೂ ಮಾರಾಟವಾಗಿತ್ತು. ಬುಧವಾರ ಕೆ.ಆರ್‌. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕನಕಾಂಬರ ರೂ. 1 ಸಾವಿರದಿಂದ ರೂ. 1,200ರವರೆಗೆ ಮಾರಾಟವಾಯಿತು. ಗಣಪತಿಗೆ ಪ್ರಿಯವಾದ ಗರಿಕೆ, ಎಕ್ಕ ಹೂವಿನ ಹಾರಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂತು.

ಚೌತಿಯ ಸಂದರ್ಭದಲ್ಲಿ ತೆಂಗಿನಕಾಯಿಗೆ ಭಾರಿ ಬೇಡಿಕೆ. ಹಾಪ್‌ಕಾಪ್ಸ್‌ನಲ್ಲಿ ಸಣ್ಣ ತೆಂಗಿನಕಾಯಿಗೆ ರೂ. 17, ಮಧ್ಯಮಗಾತ್ರದ ಕಾಯಿಗೆ ರೂ. 22 ಹಾಗೂ ದೊಡ್ಡಗಾತ್ರದ ಕಾಯಿ ರೂ. 25 ಬೆಲೆ ಇತ್ತು. ಮಾರುಕಟ್ಟೆಗಳಲ್ಲಿ ದೊಡ್ಡ ಗಾತ್ರದ ತೆಂಗಿನಕಾಯಿ ಬೆಲೆ ರೂ. 30 ಇತ್ತು.

ಮಾರುಕಟ್ಟೆಗೆ ಬಗೆ ಬಗೆಯ ಗೌರಿ ಗಣೇಶಮೂರ್ತಿಗಳು ಬಂದಿವೆ. ರೂ. 50 ರಿಂದ ರೂ. 1.5 ಲಕ್ಷದ ವರೆಗಿನ ಮೂರ್ತಿಗಳು ಮಾರುಕಟ್ಟೆಯಲ್ಲಿ ಇದ್ದವು.

‘ತಮಿಳುನಾಡಿನಿಂದ ಅಧಿಕ ಪ್ರಮಾಣದ ಹೂವುಗಳು ಬಂದಿವೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಆನೇಕಲ್‌ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾದ ಕಾರಣ ಸಾಕಷ್ಟು ಪ್ರಮಾಣದ ಹೂವುಗಳು ಬಂದಿವೆ. ಹೀಗಾಗಿ ಹೂವುಗಳ ಬೆಲೆ ಅಷ್ಟೇನು ಹೆಚ್ಚಾಗಿಲ್ಲ’ ಎಂದು ಕೆ.ಆರ್‌.ಮಾರುಕಟ್ಟೆಯ ವ್ಯಾಪಾರಿ ಷಣ್ಮುಗ ತಿಳಿಸಿದರು.

Write A Comment