* ಸಮಸ್ತ ಜನತೆಗೆ ಶುಭ ಕೋರಿದ ಸಚಿವ ವಿನಯಕುಮಾರ್ ಸೊರಕೆ
ಉಡುಪಿ: ಹಿಂದೂ ಸಂಪ್ರದಾಯದಲ್ಲಿ ಗಣೇಶ ಚತುರ್ಥಿ ಬಹಳ ಸಂಪ್ರದಾಯಬದ್ದವಾಗಿ, ವೈಭವೋಪೆತವಾಗಿ ಆಚರಿಸಲ್ಪಡುವ ಹಬ್ಬ. ವರ್ಷಂಪ್ರತಿ ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕೆನೇ ದಿನವಾದ ಚತುರ್ಥಿ ದಿನವನ್ನು ಗಣೇಶ ಚತುರ್ಥಿಯಾಗಿ ಆಚರಿಸಲಾಗುತ್ತದೆ.ವಿಘ್ನವಿನಾಶಕ, ಪ್ರಥಮಪೂಜಿತ, ಏಕದಂತ ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಗಣಪತಿಯನ್ನು ವಿಶೇಷವಾಗಿ ಪೂಜಿಸಿ ಜನತೆ ಸಂಭ್ರಮಿಸಿದರು. ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಕೂಡ ಮಂದಿರವನ್ನು ಉಳ್ಳವನು ‘ಗಣಪತಿ’.
ಪ್ರಥಮ ಪೂಜಿತ ಗಣಪ: ಗಣಪತಿ ಎಲ್ಲಾ ಗಣಗಳಿಗೂ ಅಧಿಪತಿ. ಹೀಗಾಗಿ ಎಲ್ಲಾ ಪೂಜೆ ಪುನಸ್ಕಾರ ಸಂದರ್ಭವೂ ಪ್ರಥಮ ಪೂಜಿತ ವಿಘ್ನ ವಿನಾಶಕನ ಪೂಜೆ ನಡೆಸಿ ಆತನ ಕ್ರಪೆಗೆ ಪಾತ್ರರಾಗುತ್ತಾರೆ.
ಗರಿಕೆ & ಮೋದಕ ಪ್ರಿಯ ಗಣಪ: ಗಣೇಶನಿಗೆ ಗರಿಕೆ ಅಥವಾ ದೂರ್ವೆ ಬಲು ಪ್ರಿಯವಾದುದು. ಅದಕ್ಕಾಗಿಯೇ ಆತನಿಗೆ ದೂರ್ವಾರ್ಚನೆ ನಡೆಸುವ ಸಂಪ್ರದಾಯವೂ ಇದೆ. ಸಿಹಿ ಮೋದಕ ಪ್ರಿಯ ಗಣಪ ಎನ್ನುವ ಪುರಾಣವೂ ಇದೆ.
ಕುಂದಾಪುರದಲ್ಲಿ ಚೌತಿ ಗೌಜು:
ಕುಂದಾಪುರ ತಾಲೂಕಿನೆಲ್ಲೆಡೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಗುರುವಾರದಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ಮಳೆಯ ನಡುವೆಯೂ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆನಿಂದಲೇ ವಿಶೇಷ ಪೂಜಾ-ಕೈಂಕರ್ಯಗಳು, ಗಣಹೋಮ, ಮಹಾಪ್ರಸಾದ ಮೊದಲಾದ ಧಾರ್ಮಿಕ ಕಾರ್ಯಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರ್ಶನ ಪಡೆದು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಕುಟುಂಬ ಸಮೇತರಾಗಿ ಆನೆಗುಡ್ಡೆ ಹಾಗೂ ಹಟ್ಟಿಯಂಗಡಿ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಸ್ತ ಜನತೆಗೂ ಗಣೇಶ ಹಬ್ಬದ ಶುಭಾಶಯ ಕೋರಿದರು. ಇನ್ನು ಹಲವು ವಿ.ಐ.ಪಿಗಳು ಪ್ರಮುಖ ದೇವಸ್ಥಾನಗಳಾದ ಹಟ್ಟಿಯಂಗಡಿ ಹಾಗೂ ಆನೆಗುಡ್ಡೆ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇನ್ನು ತಾಲೂಕಿನ ಗುಡ್ಡಟ್ಟು ಜಲಾದಿವಾಸಿ ಗಣಪತಿ ದೇವಸ್ಥಾನ, ಬೇಳೂರಿನ ಕಲ್ಲುಗಣಪತಿ ದೇವಸ್ಥಾನ, ಮರವಂತೆ ಅರೆಹೊಳೆ ಗಣಪತಿ ದೇವಸ್ಥಾನ ಮೊದಲಾದೆಡೆ ಗಣೇಶ ಚತುರ್ಥಿ ಪ್ರಯುಕ್ತ ಭಕ್ತರ ದಂಡು ತುಂಬಿತ್ತು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು ಗಣಪತಿ ಪ್ರತಿಷ್ಠಾಪನೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಪ್ರಮುಖ ಕಡೆಗಳಲ್ಲಿ ಕುಂದಾಪುರ ಸಂಚಾರಿ ಠಾಣೆಯ ನೇತ್ರತ್ವದಲ್ಲಿ ಸಂಚಾರಿ ವ್ಯವಸ್ಥೆಯನ್ನು ಹಾಗೂ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.