ಕರ್ನಾಟಕ

ಮಂಡ್ಯ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ: ಬರ ನಿರ್ವಹಣೆಗೆ ಉದ್ಯೋಗ ಖಾತರಿ ಯೋಜನೆ ಬಳಸಿ; ಅಧಿಕಾರಿಗಳಿಗೆ ಜಿಪಂ ಸಿಇಒ ರೋಹಿಣಿ ಸೂಚನೆ

Pinterest LinkedIn Tumblr

22SABHEಮಂಡ್ಯ, ಸೆ.15: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಉದ್ಯೋಗ ಬಯಸುವವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು. ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ಜಿಪಂ ಸಿಇಒ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಕಾರ್ಯನಿರ್ವಾಹಕ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಜನರಿಗೆ ಕೆಲಸ ನಿರಾಕರಿಸಬಾರದು. ಉದ್ಯೋಗ ನೀಡುವುದು ಹಾಗೂ ಕುಡಿಯುವ ನೀರಿನ ಬಗ್ಗೆ ದೂರುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಕೂಲಿ ಹಣವನ್ನು ವಿಳಂಬವಿಲ್ಲದೆ ಸಕಾಲದಲ್ಲಿ ಪಾವತಿಸಬೇಕು. ಯಾವ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
ಅಭಿವೃದ್ಧಿಗೆ ಒತ್ತು ನೀಡಿ:
ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮಗಳ ಪಟ್ಟಿಯಲ್ಲಿರುವ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನ ಮಾಡುವ ಮುನ್ನ ಗ್ರಾಮದಲ್ಲಿ ಯಾವ ಕೆಲಸಗಳು ಆಗಬೇಕು ಮತ್ತು ಜನಸಮುದಾಯಕ್ಕೆ ಅವಶ್ಯವಿರುವ ಕಾಮಗಾರಿಗಳ ಬಗ್ಗೆ ಪಟ್ಟಿಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಸಿಇಒ ರೋಹಿಣಿ ಸಿಂಧೂರಿ ಹೇಳಿದರು. ಗೋದಾಮು, ಧಾನ್ಯಗಳ ಒಕ್ಕಣೆ ಕಣ, ಉದ್ಯಾನ ನಿರ್ಮಾಣ, ಕುರಿ/ದನದ ಕೊಟ್ಟಿಗೆ, ಭೂ ಅಭಿವೃದ್ಧಿ/ ಭೂಮಿ ಸಮತಟ್ಟು, ಸ್ಮಶಾನ, ಆಟದ ಮೈದಾನ ಅಭಿವೃದ್ಧಿ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳ ಅನುಷ್ಠಾನ್ಕೆ ಮಹತ್ವ ನೀಡಬೇಕು. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ವಸತಿ ಯೋಜನೆ:  2015-16ನೆ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ 6,400 ಮತ್ತು ಇಂದಿರಾ ಆವಾಸ್ ವಸತಿ ಯೋಜನೆಯಡಿ 2,695 ಮನೆಗಳ ಗುರಿ ನೀಡಿದ್ದು, ಅರ್ಹ ಫಲಾನುಭ ವಿಗಳನ್ನು ಸರಕಾರದ ಮಾರ್ಗಸೂಚಿಯಂತೆ ಗ್ರಾಮಸಭೆಗಳ ಮೂಲಕ ಅಥವಾ ವಸತಿರಹಿತ ಫಲಾನುಭವಿಗಳ ಸಮೀಕ್ಷೆ ನಡೆಸಿದ್ದಲ್ಲಿ ಆದ್ಯತಾವಾರು ಅರ್ಹ ಫಲಾನುಭವಿಗಳ ಪಟ್ಟಿ ಸಲ್ಲಿಸಿ ಅನುಮೋದನೆ ಪಡೆಯುವಂತೆ ಅವರು ಸೂಚಿಸಿದರು.
2010-11ರಿಂದ 2014-15ನೆ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ 40,038 ಫಲಾನುಭವಿಗಳು ಆಯ್ಕೆಯಾಗಿದ್ದು, ಶೇ.70ರಷ್ಟು ಮನೆಗಳು ಪೂರ್ಣಗೊಂಡಿವೆ. 9,419 ಮನೆಗಳು ಪ್ರಗತಿ ಹಂತದಲ್ಲಿವೆ. ಉದ್ಯೋಗ ಖಾತರಿ ಯೋಜನೆಯಡಿ ಮನೆಗಳ ಪ್ರಗತಿ ಹಂತಗಳಿಗೆ ಅನುಗುಣ ವಾಗಿ ಕಡ್ಡಾಯವಾಗಿ 90 ಮಾನವ ಉದ್ಯೋಗ ದಿನಗಳ ಕೂಲಿ ನೀಡುವಂತೆಯೂ ಅವರು ತಾಕೀತು ಮಾಡಿದರು.
ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಎನ್. ಡಿ.ಪ್ರಕಾಶ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ, ಯೋಜನಾ ನಿರ್ದೇಶಕರು (ಡಿಆರ್‌ಡಿಎ ಕೋಶ) ಗಣಪತಿ ಪಿ.ನಾಯಕ್ ಸಭೆಯಲ್ಲಿ ಉಪಸ್ಥಿತರಿದ್ದರು.

Write A Comment