ಕರ್ನಾಟಕ

ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಜೊತೆ ‘ಕಳಸಾ-ಬಂಡೂರಿ’ ಕುರಿತು ಇಂದು ಮಠಾಧೀಶರ ಚರ್ಚೆ

Pinterest LinkedIn Tumblr

goaನರಗುಂದ, ಸೆ.14- ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ 61 ದಿನಗಳಿಂದ ರೈತರು ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದ್ದು , ನಾಳೆ (ಮಂಗಳವಾರ) ಉತ್ತರ ಕರ್ನಾಟಕದ ಸುಮಾರು 25 ಮಠಾಧೀಶರು ಗೋವಾಕ್ಕೆ ತೆರಳಿ ಅಲ್ಲಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೋರಾಟಗಾರರು ಈ ವಿಷಯ ತಿಳಿಸಿದ್ದು , 25 ಮಠಾಧೀಶರು ಗೋವಾಕ್ಕೆ ನಾಳೆ ಬೆಳಗ್ಗೆ ತೆರಳಿ ಮುಖ್ಯಮಂತ್ರಿಗಳನ್ನು ಕಂಡು ಯೋಜನೆ ಅನುಷ್ಟಾನಕ್ಕೆ ಇರುವ ಅಡ್ಡಿ ಆತಂಕಗಳೇನು ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.  ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಮಠಾಧೀಶರ ನಿಯೋಗ ಗೋವಾ ಮುಖ್ಯಮಂತ್ರಿಗಳಿಗೆ ಒತ್ತಡ ತರುವ ಸಾಧ್ಯತೆ ಇದೆ ಎನ್ನಲಾಗಿದೆ.

ನ್ಯಾಯಾಧೀಕರಣದ ಹೊರಗೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಸೂಕ್ತ. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ ಸಿಎಂರೊಡನೆ ಚರ್ಚಿಸುವುದು ಅಗತ್ಯ ಎಂದು ಮಠಾಧೀಶರು ಅಭಿಪ್ರಾಯಪಟ್ಟಿದ್ದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ತಿಳಿಸಿದ್ದಾರೆ.

ಬಾರದ ಚಿತ್ರ ತಂಡ ಆಕ್ರೋಶ:
ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನರಗುಂದ, ನವಲಗುಂದ, ಧಾರವಾಡ, ಬೆಳಗಾವಿ ಜಿಲ್ಲೆಯ ರೈತರು ವಿವಿಧ ಸಂಘಟನೆಗಳವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಲು ಇಡೀ ಚಿತ್ರರಂಗ ತಂಡ ಹುಬ್ಬಳ್ಳಿಗೆ ಆಗಮಿಸಿ ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ತುಂಬಿತು. ಆದರೆ  ಚಲನಚಿತ್ರ ತಂಡದವರು ಹೋರಾಟದ ಸ್ಥಳವಾದ ನರಗುಂದಕ್ಕೆ ಆಗಮಿಸದಿರುವುದು ನಿರಾಶೆ ಮೂಡಿಸಿದೆ. ಬರೀ ರೋಡ್ ಶೋ ಮಾಡಿ ಉದ್ದುದ್ದ ಭಾಷಣ ಬಿಗಿದರೆ ಸಮಸ್ಯೆ ಪರಿಹಾರವಾಗಲ್ಲ. ಪರಿಣಾಮಕಾರಿಯಾದ ಹೋರಾಟ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವ ಪ್ರತಿಭಟನೆ ನಡೆಸಬೇಕೆಂದು ಹೋರಾಟಗಾರ ವಿಜಯಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ನಿನ್ನೆ ನಡೆದ ಧರಣಿ ಕಾರ್ಯಕ್ರಮದಲ್ಲಿ ಧಾರವಾಡ ಮನಸೂರು ಗ್ರಾಮದ ಬಸವರಾಜದೇವರು, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್, ಸೊಬರದ ಮಠ, ವಿಜಯಕುಮಾರ್ ಕುಲಕರ್ಣಿ, ಬಸವರಾಜ ಸಾಬಳೆ, ವೀರಭದ್ರಪ್ಪ ಹೂಗಾರ, ಎಸ್.ಬಿ.ಗೋನಾಳ, ಲೀಲಕ್ಕ ಹಸಬಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ನವಲಗುಂದ ವರದಿ: ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆದಿರಲುವ ಧರಣಿ ಕಾರ್ಯಕ್ರಮ ಮುಂದುವರೆದಿದೆ. ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ್ದ ಚಿತ್ರ ತಂಡ ನವಲಗುಂದಕ್ಕೆ ಬಾರದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು ವಿವಿಧ ಸಂಘಟನೆಗಳ ಮುಖಂಡರು ಕನ್ನಡ ಪರ ಸಂಘಟನೆಗಳು ನಗರದಲ್ಲಿ ಟಯರ್‌ಗೆ ಬೆಂಕಿ ಹಬ್ಬಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.  ಹೋರಾಟ ಸ್ಥಳವಾದ ನವಲಗುಂದ ಮತ್ತು ನರಗುಂದಕ್ಕೆ ತಂಡ ಬರದೇ ಇರುವುದು ಅಸಮಾಧಾನ ಮೂಡಿಸಿದೆ. ಪ್ರಚಾರದ ಗಿಮಿಕ್‌ಗೋಸ್ಕರ ತಂಡ ಬಂದಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

Write A Comment