ಸೂಪರ್‍ಹೀರೋಗಳ ಸಿನೆಮಾಗಳನ್ನು ನೀವು ನೋಡಿದ್ದೀರಿ. ಸೂಪರ್‍ಹೀರೋಯಿನ್ ಗಳ ಸಿನೆಮಾ ನೋಡಿದ್ದೀರಾ? ನೋಡಿಲ್ಲವಾದರೆ ನೋಡಲು ಇದು ಸಕಾಲ. ನಿಮ್ಮ ಮೆಚ್ಚಿನ ಸನ್ನಿ ಲಿಯೋನ್ ಎಂಬ ಸುರಸುಂದರಾಂಗಿ ಹಿಂದಿಯಲ್ಲಿ ಸೂಪರ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾಳೆ.
ಇದು ಸ್ವತಃ ಸನ್ನಿ ಮತ್ತಾಕೆಯ ಗಂಡ ಡೇನಿಯಲ್ ವೆಬರ್ ನಿರ್ಮಿಸುತ್ತಿರುವ ಸಿನೆಮಾ. ಹೆಸರು ಇನ್ನೂ ನಿಕ್ಕಿಯಾಗಿಲ್ಲ. ಈಗಾಗಲೇ ತಾನು ಮುಖ್ಯ ಭೂಮಿಕೆಯಲ್ಲಿರುವ ಒಂದು ಆಕ್ಷನ್ ಚಿತ್ರವನ್ನು ಈಕೆ ದಯಪಾಲಿಸಿದ್ದಾಳೆ. ಅದರ ಹೆಸರು ಟೀನಾ ಆಂಡ್ ಲೊಲೊ. ಮುಂದಿನ ಚಿತ್ರದಲ್ಲಿ ಆಕೆ ಇನ್ನೂ ಕೊಂಚ ಮುಂದೆ ಹೋಗಿ ಗಾಳಿಯಲ್ಲಿ ಹಾರುವ, ಗಾಜಿನ ಕಟ್ಟಡಗಳನ್ನು ಪುಡಿಪುಡಿ ಮಾಡುವ, ದುಷ್ಟರನ್ನು ಸದೆಬಡಿಯುವ ಹೀರೋಯಿನ್ ಆಗಿ ಕಾಣಿಸುತ್ತಾಳೆ. ಹೃತಿಕ್ ನಟನೆಯ `ಕ್ರಿಶ್’ ನೆನಪಾಯಿತೆ? ಹ್ಹಾಂ, ಇದನ್ನು ಕ್ರಿಶ್‍ನ ಹೆಣ್ಣು ಅವತರಣಿಕೆ ಎನ್ನಬಹುದೇನೊ.
ಹೊಸ ಫಿಲಂನಲ್ಲಿ, ಈ ಹೆಣ್ಣಿಗೆ ಇಂಥ ಸೂಪರ್ ಪವರ್‍ಗಳು ಎಲ್ಲಿಂದ ಹೇಗೆ ಬಂದವು ಎಂಬ ವಿವರಗಳೂ ಇರುತ್ತವಂತೆ. ಅಂದರೆ ಇದು ಒಂದು ಚಿತ್ರಸರಣಿಗೆ ಮುನ್ನುಡಿ ಎಂದು ನಾವು ಊಹಿಸಬಹುದು. ಸನ್ನಿಗೆ ಆಕೆಯದೇ ಅಭಿಮಾನಿ ವರ್ಗವಿದೆ. ಆಕ್ಷನ್‍ಗೂ ಅದರದೇ
ನೋಡುಗರಿದ್ದಾರೆ. ಎರಡೂ ಜಾನರ್‍ನ ಪ್ರೇಕ್ಷಕರು ಸೇರಿದರೆ ಚಿತ್ರ ಹಿಟ್ ಆಗುವುದು ಕಷ್ಟವಿಲ್ಲ. ಆದರೆ ಇದುವರೆಗೆ ಸನ್ನಿ ನಟಿಸಿದ ಚಿತ್ರಗಳು ಅಂಥ ಗಮನ ಸೆಳೆದಿಲ್ಲ ಎಂಬುದಿಲ್ಲಿ ನೆನೆಯಬಹುದು. ಅನ್ಯರ ಸಂಗ ಅಭಿಮಾನ ಭಂಗ ಎಂಬಂತೆ, ಇದುವರೆಗೆ ಬೇರೆಯವರ ಚಿತ್ರಗಳಲ್ಲಿ ನಟಿಸಿದ ಸಾಕಾಗಿ ಈಗ ತನ್ನದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾಳೆ ಸನ್ನಿ.
ಅಂದಹಾಗೆ, ಸನ್ನಿ ಮೊದಲಿನಿಂದಲೇ ಒಂದು ರೀತಿಯ ಸೂಪರ್‍ಹೀರೋಯಿನ್ ಅಲ್ವಾ? ಎಂಥ ಗಂಡಸನ್ನೂ ಸದೆಬಡಿಯುವ ತಾಕತ್ತನ್ನು ಆಕೆಯ ತೋಳು ತೊಡೆಗಳಿಗೆ ಆ ಭಗವಂತ ದಯಪಾಲಿಸಿದ್ದಾನಲ್ಲ!