ಕರ್ನಾಟಕ

ಹುಲಿವಾನ ಘರ್ಷಣೆ: ಸಚಿವ ಅಂಬರೀಶ್ ಭೇಟಿ

Pinterest LinkedIn Tumblr

ambi_____ಮಂಡ್ಯ, ಸೆ.13: ಅಂತರ್ಜಾತಿ ಪ್ರೇಮ ಪ್ರಕರಣದ ಘರ್ಷಣೆ ಸಂಬಂಧ ಬಂಧಿತರಾಗಿರುವ ಹುಲಿವಾನ ಗ್ರಾಮದ ಅಮಾಯಕರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಭರವಸೆ ನೀಡಿದ್ದಾರೆ.

ರವಿವಾರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಘಟನೆ ಯಲ್ಲಿ ಕೆಲವು ಅಮಾಯಕರನ್ನು ಪೊಲೀಸರ ಬಂಧಿಸಿದ್ದಾರೆನ್ನಲಾಗಿದ್ದು, ಬಿಡು ಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಯುವಕರು ಮನೆತೊರೆದಿರುವುದರಿಂದ ತಾಯಂದಿರು, ಪೋಷಕರು ಆತಂಕಗೊಂಡಿ ದ್ದಾರೆ. ಇದನ್ನು ಸರಿಪಡಿಸುತ್ತೇನೆ. ತಪ್ಪಿ ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಸವರ್ಣೀಯ ಮತ್ತು ದಲಿತ ಕುಟುಂಬ ಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಅಂಬರೀಶ್, ಎರಡೂ ವರ್ಗದ ಮುಖಂಡರ ಜೊತೆ ಚರ್ಚಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಘಟನೆಗೆ ಅವರು ವಿಷಾದ ವ್ಯಕ್ತಪಡಿಸಿದರು. ವಿದೇಶ ಪ್ರವಾಸದಲ್ಲಿದ್ದ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ತಕ್ಷಣ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮಸ್ಥರ ಅಳಲು

ನಮ್ಮ ಮನೆ, ಆಸ್ತಿಪಾಸ್ತಿಗೆ ಹಾನಿ ಯಾಗಿದೆ. ಯಾವುದೇ ಪರಿಹಾರ ಬಂದಿಲ್ಲ. ಭಯದ ವಾತಾವರಣವಿದೆ. ಕೂಲಿ ಕೆಲಸಕ್ಕೆ ಹೋಗಲಾಗುತ್ತಿಲ್ಲ. ನಮ್ಮ ಮಕ್ಕಳು ಶಾಲಾ-ಕಾಲೇಜಿಗೆ ತೆರ ಳಲೂ ಆತಂಕಪಡುವಂತಾಗಿದೆ ಎಂದು ದಲಿತ ಮಹಿಳೆಯರು ಸಚಿವರಲ್ಲಿ ಬೇಗುದಿ ತೋಡಿಕೊಂಡರು. ಘಟನೆಗೆ ಸಂಬಂಧ ವಿಲ್ಲದಿದ್ದರೂ ಪೊಲೀಸರು ಮನೆಮನೆಗೆ ನುಗ್ಗಿ ಮಕ್ಕಳನ್ನು ಬಂಧಿಸಿದ್ದಾರೆ. ಹೆದರಿಕೆಯಿಂದ ಮನೆ ತೊರೆಯುವಂತೆ ಮಾಡಿದ್ದಾರೆಂದು ಸವರ್ಣೀಯ ಮಹಿಳೆಯರೂ ಸಚಿವರಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಬರೀಶ್, ಗ್ರಾಮದಲ್ಲಿ ಯಾವುದೇ ಅಶಾಂತಿಗೆ ಅವಕಾಶ ನೀಡಬಾರದು. ಶಾಂತಿ ಸ್ಥಾಪನೆಗೆ ಕ್ರಮವಹಿಸಬೇಕು. ಅಮಾಯಕರನ್ನು ಬಂಧಿಸಬಾರದು. ಅಗತ್ಯವಿದ್ದವರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳದಲ್ಲೇ ಇದ್ದ ಎಸ್ಪಿ ಭೂಷಣ್ ಜಿ ಬೊರಸೆಗೆ ಸೂಚಿಸಿದರು. ತಾಪಂ ಅಧ್ಯಕ್ಷ ಮಹೇಶ್, ಕಾಂಗ್ರೆಸ್ ಮುಖಂಡರಾದ ಅಮರಾವತಿ ಚಂದ್ರಶೇಖರ್, ಸಿ.ಡಿ.ಗಂಗಾಧರ್, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment