ಕರ್ನಾಟಕ

ಬಿಜೆಪಿ ರೈತ ಚೈತನ್ಯ ಯಾತ್ರೆ ಸಮಾರೋಪ: ಕೋಮಾದಲ್ಲಿರುವ ಸರಕಾರವನ್ನು ಸೋನಿಯಾ ಎಚ್ಚರಿಸಲಿ: ಯಡಿಯೂರಪ್ಪ

Pinterest LinkedIn Tumblr

yatre_ಮೈಸೂರು,ಸೆ.13: ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸದ ಕಾಂಗ್ರೆಸ್ ಸರಕಾರ ಕೋಮಾ ಸ್ಥಿತಿಯಲ್ಲಿದೆ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅನ್ನದಾತನ ಸಾಲ ಮನ್ನಾ ಮಾಡುವವರೆಗೂ ಬಿಜೆಪಿ ರೈತ ಚೈತನ್ಯ ಯಾತ್ರೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ರೈತರ ಆತ್ಮಹತ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಇದೆ. ರೈತರ ಸರಣಿ ಆತ್ಮಹತ್ಯೆ ಸಂಭವಿಸುತ್ತಿದೆ. ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಕೋಮಾದಲ್ಲಿರುವ ಸರಕಾರವನ್ನು ಬಡಿದೆಬ್ಬಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಬರಬೇಕಿದೆ ಎಂದು ಲೇವಡಿ ಮಾಡಿದರು.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಅವರ ಸಾಲವನ್ನು ಸರಕಾರ ಮನ್ನಾ ಮಾಡಬೇಕು. ಆದರೆ, ದುರದೃಷವಶಾತ್ ಸಿಎಂ ಸಿದ್ದರಾಮಯ್ಯ ಅವರು ಇಡೀ ರಾಜ್ಯವನ್ನೇ ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ. ಬಿಜೆಪಿ ತನ್ನ ಐದು ವರ್ಷದ ಆಡಳಿತದಲ್ಲಿ 43,324 ಕೋಟಿ ರೂ. ಸಾಲ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ ಎರಡು ವರ್ಷದಲ್ಲಿ 42,329 ಕೋಟಿ ರೂ.ಗಳ ಸಾಲ ಮಾಡಿದೆ. ರಾಜ್ಯದಲ್ಲಿ ಅರ್ಥಿಕ ಅರಾಜಕತೆ ತಲೆದೋರಿದೆ ಎಂದು ಆರೋಪಿಸಿದರು.

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಸಾಲದ ಬಾಧೆ, ಬರಗಾಲದಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯ ದಾರಿ ಹಿಡಿಯಬಾರದು ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮನವಿ ಮಾಡಿದರು. ರೈತ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬು ರೈತ. ಎಂತಹುದೇ ಕಷ್ಟ, ಸಂಕಷ್ಟ ಎದುರಾದರೂ ಎದೆಗುಂದದೆ ಮುನ್ನುಗ್ಗಬೇಕು. ರೈತರ ಸಮಸ್ಯೆಗೆ ಸ್ಪಂದಿಸದ ಸರಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು. ಕೇಂದ್ರ ಸರಕಾರ ರಾಜ್ಯದ ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿದೆ. ಎಲ್ಲದಕ್ಕೂ ಕೇಂದ್ರದ ಕಡೆಗೆ ಅದು ಬೊಟ್ಟು ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅನೇಕ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಒಂದೇ ಪರಿಹಾರ ಎಂದು ತಿಳಿಸಿದರು. ಅಮಿತ್ ಷಾ ಚಕ್ಕರ್: ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆದ ರೈತ ಚೈತನ್ಯ ಯಾತ್ರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಕ್ಕರ್ ಹಾಕಿದ್ದಾರೆ. ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಬೇಕಿದ್ದ ಷಾ ಎರಡನೆ ಬಾರಿಗೆ ಮೈಸೂರು ಪ್ರವಾಸವನ್ನು ರದ್ದು ಮಾಡಿದ್ದಾರೆ. ಕಳೆದ ಜೂ.10ರಂದು ಜನ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಅಮಿತ್ ಷಾ ತಪ್ಪಿಸಿಕೊಂಡಿದ್ದರು. ಇದೀಗ ರೈತರ ಚೈತನ್ಯ ಯಾತ್ರೆಯ ಸಮಾರೋಪ ಸಮಾರಂಭ ಕ್ಕೂ ಚಕ್ಕರ್ ಹಾಕಿದ್ದಾರೆ.

ರೈತ ಚೈತನ್ಯ ಯಾತ್ರೆ: ಕಳೆದ ಆ. 31ರಂದು ಉತ್ತರ ಕರ್ನಾಟಕದ ಹಾವೇರಿಯಲ್ಲಿ ಆರಂಭಗೊಂಡಿದ್ದ ಬಿಜೆಪಿ ರೈತ ಚೈತನ್ಯ ಯಾತ್ರೆ ಮೈಸೂರಿನಲ್ಲಿ ಸಮಾಪ್ತಿ ಕಂಡಿತು. ಇದರ ಅಂಗವಾಗಿ ನಗರದಲ್ಲಿ ಬಿಜೆಪಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ನಗರದ ಸ್ವಾತಂತ್ರ್ಯ ಉದ್ಯಾನದಿಂದ ಹೊರಟ ರ್ಯಾಲಿ ರಾಘವೇಂದ್ರ ಮಠದ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಮೂಲಕ ಕೆ.ಜೆ.ಮೈದಾನ ತಲುಪಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಮಾಜಿ ಸಚಿವರಾದ ಉದಾಸಿ, ಎಸ್.ಎ.ರಾಮದಾಸ್, ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್ ಉಪಸ್ಥಿತರಿದ್ದರು.

Write A Comment