ಅಂತರಾಷ್ಟ್ರೀಯ

ಪ್ರತಿದಿನ ಐದು ವರ್ಷದೊಳಗಿನ 16 ಸಾವಿರ ಮಕ್ಕಳ ಸಾವು: ಯುನಿಸೆಫ್

Pinterest LinkedIn Tumblr

unicef-logoವಿಶ್ವಸಂಸ್ಥೆ, ಸೆ.13: ವಿಶ್ವದಾದ್ಯಂತ ಸುಮಾರು 59 ಲಕ್ಷ ಮಕ್ಕಳು ತಮ್ಮ ಐದನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಮೊದಲೇ ಸಾವಿಗೀಡಾಗುತ್ತಿದ್ದಾರೆ ಎಂದು ಯುನಿಸೆಫ್‌ನ ವರದಿಯೊಂದು ತಿಳಿಸಿದೆ.
ಶಿಶುಮರಣ ದರವನ್ನು ಕಡಿಮೆಗೊಳಿಸುವಲ್ಲಿ 1990ರ ಬಳಿಕ ಗಣನೀಯ ಪ್ರಗತಿ ಸಾಧಿಸಲಾಗಿದೆಯಾದರೂ, ಪ್ರಮುಖ ಸವಾಲು ಈಗಲೂ ಜಗತ್ತಿನ ಮುಂದಿದೆ ಎಂದು ಯುನಿಸೆಫ್‌ನ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕಿ ಗೀತಾರಾವ್ ಗುಪ್ತಾ ಹೇಳಿದ್ದಾರೆ.
ಸೂಕ್ತ ಕ್ರಮಗಳ ಮೂಲಕ ಈ ಸಾವನ್ನು ತಡೆಗಟ್ಟಬಹುದಾಗಿದೆ ಎಂದು ಯುನಿಸೆಫ್‌ನ ವರದಿ ಎಚ್ಚರಿಸಿದೆ.
1990ರ ಬಳಿಕ ಶಿಶು ಮರಣ ದರದಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಇಳಿಕೆ ಕಂಡು ಬಂದಿರುವುದನ್ನೂ ವರದಿ ಉಲ್ಲೇಖಿಸಿದೆ.
1990ರ ಅವಧಿಯಲ್ಲಿ ಐದು ವರ್ಷದೊಳಗಿನ ಸುಮಾರು 12.7 ದಶಲಕ್ಷ ಮಕ್ಕಳು ಸಾವಿಗೀಡಾಗಿದ್ದ ಪ್ರಮಾಣವು 2015ರ ವೇಳೆಗೆ 6 ದಶಲಕ್ಷಗಳಿಗೆ ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ತಿಳಿಸಿದೆ.
ಐದು ವರ್ಷದೊಳಗಿನ ಸುಮಾರು 16 ಸಾವಿರ ಮಕ್ಕಳು ಪ್ರತಿದಿನ ಸಾವಿಗೀಡಾಗುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿರುವ ವರದಿ ವಿವರಿಸಿದೆ.
ಶಿಶುಮರಣ ಪ್ರಕರಣಗಳಲ್ಲಿ ಶೇಕಡಾ 50ಕ್ಕಿಂತಲೂ ಅಧಿಕ ಪ್ರಮಾಣದವು ನ್ಯೂನ ಪೋಷಣೆಯಿಂದ ಸಂಭವಿಸುತ್ತಿವೆ ಮತ್ತು ಅವುಗಳಲ್ಲಿ ಶೇಕಡಾ 45ರಷ್ಟು ಮಕ್ಕಳು ಹುಟ್ಟಿದ ಮೊದಲ 28 ದಿನಗಳ ಅವಧಿಯಲ್ಲಿ ಸಾಯುತ್ತಿವೆ ಎಂದು ವರದಿ ವಿವರಿಸಿದೆ.
ಅವಧಿಪೂರ್ವ ಹೆರಿಗೆ, ನ್ಯುಮೋನಿಯ, ಹೆರಿಗೆ ಅವಧಿಯಲ್ಲಿನ ಸಂಕೀರ್ಣತೆ, ಅತಿಸಾರ, ರಕ್ತ ನಂಜಾಗುವಿಕೆ ಹಾಗೂ ಮಲೇರಿಯ ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ವಿವರಿಸಿದೆ.
ಐದು ವರ್ಷದೊಳಗಿನ ಮಕ್ಕಳ ಸಾವಿನಲ್ಲಿ ಶೇಕಡಾ 50ಕ್ಕಿಂತಲೂ ಅಧಿಕ ಪ್ರಕರಣಗಳು ನ್ಯೂನಪೋಷಣೆಗೆ ಸಂಬಂಧಿಸಿವೆ. ಇಂತಹ ಸಾವನ್ನು ಸೂಕ್ತ ಕ್ರಮಗಳನ್ನು ಜಾರಿಗೊಳಿಸುವುದರಿಂದ ತಡೆಯಲು ಸಾಧ್ಯವಿದೆ ಎಂದು ಅದು ಹೇಳಿದೆ.
ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಲ್ಲಿ ವಾರ್ಷಿಕ 38 ದಶಲಕ್ಷ ಎಳೆಯ ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಿಸಬಹುದಾಗಿದೆ ಎಂದು ಯುನಿಸೆಫ್ ತಿಳಿಸಿದೆ.

Write A Comment