ಅತ್ಯುತ್ತಮ ಅಂಡಾಣು ಹಾಗೂ ಶಕ್ತಿಯುತ ವೀರ್ಯಾಣುವಿದ್ದೂ ಅವೆರಡೂ ಸಂಯೋಗವಾಗದಿದ್ದಲ್ಲಿ ಅವು ಅನುಪಯುಕ್ತವೇ ಸರಿ. ಅವುಗಳ ಸಂಯೋಗವಾಗಬೇಕೆಂದರೆ ಸಮರ್ಪಕ ಮಿಲನವಾಗಬೇಕು. ಅಂಡಾಣು ಬಿಡುಗಡೆಯಾದ ಅವಧಿಯಲ್ಲಿಯೇ ಮಿಲನವಾಗಬೇಕು. ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ದಿನ ಅಥವಾ ಅದಕ್ಕೆ ಪೂರ್ವದಿನಗಳಲ್ಲಿಯೂ (ವೀರ್ಯಾಣು ಬಿಡುಗಡೆಯಾದ ನಂತರ ಹಲವಾರು ಗಂಟೆಗಳಷ್ಟು ಜೀವಂತವಾಗಿರಬಲ್ಲದು) ಮಿಲನವಾಗಬೇಕು. ಒಂದು ವೇಳೆ ಈ ಅವಧಿಯನ್ನು ಬಳಸಿಕೊಳ್ಳದಿದ್ದರೆ ಆ ತಿಂಗಳು ಗರ್ಭಧಾರಣೆ ತಪ್ಪಿದಂತೆಯೇ. ಹಾಗಾಗಿ ನಿಮ್ಮ ಋತುಚಕ್ರವನ್ನು ಗಮನಿಸಿ. ಪ್ರತಿ ಋತುಚಕ್ರದ ಅವಧಿಯನ್ನು ಲೆಕ್ಕ ಹಾಕಿ. ನಿಮ್ಮ ಋತುಚಕ್ರವನ್ನು ಗಮನದಲ್ಲಿಟ್ಟುಕೊಂಡು, ಮಿಲನಕ್ಕೆ ಆಸ್ಪದವಾಗುವಂತೆ ಅಣಿಯಾಗಿ. ನಿಮ್ಮ ಸಂಗಾತಿಯನ್ನೂ ಅಣಿಗೊಳಿಸಿ. ಮಿಲನವನ್ನು ಆ ಅವಧಿಗೆ ಹೊಂದುವಂತೆ ನೋಡಿಕೊಳ್ಳಿ.
ನಿಮ್ಮ ಚಕ್ರವನ್ನು ಹಿಂಬಾಲಿಸಿ
ಸಾಮಾನ್ಯವಾಗಿ ಋತುಚಕ್ರದ 14ನೇ ದಿನವನ್ನು ಫಲಿತ ದಿನವೆಂದು ಭಾವಿಸಲಾಗುತ್ತದೆ. ಆದರೆ ಇದು ಕೇವಲ 28 ದಿನಗಳ ನಿಖರವಾದ ಚಕ್ರಹೊಂದಿರುವ ಮಹಿಳೆಯರಲ್ಲಿ ಮಾತ್ರ ಸತ್ಯವಾಗಿದೆ. ಆದರೆ ಅದು ಋತುಚಕ್ರದ ನಂತರದ 14 ದಿನಗಳಲ್ಲ, ಋತುಚಕ್ರದ ಪೂರ್ವದ 14ನೆಯ ದಿನಗಳು ಎಂದರ್ಥ. ಒಂದು ವೇಳೆ ನಿಮ್ಮದು ನಿಯಮಿತವಾದ ಋತುಚಕ್ರವಾಗಿದ್ದರೆ ಮುಂದಿನ ಋತುಚಕ್ರದ ದಿನದಿಂದ ಎರಡುವಾರಗಳನ್ನು ಹಿಂದಕ್ಕೆ ಎಣಿಸಿದರೆ ನಿಮ್ಮ ಅಂಡಾಣು ಬಿಡುಗಡೆಯ ದಿನವನ್ನು ಅರಿಯಬಹುದಾಗಿದೆ. ಒಂದು ವೇಳೆ ನಿಮ್ಮದು 30 ದಿನಗಳ ಅವಧಿಯ ಋತುಚಕ್ರವಾಗಿದ್ದರೆ 16ನೆಯ ದಿನ ಅಂಡಾಣು ಫಲಿತವಾಗುತ್ತದೆ. 26 ದಿನಗಳ ಚಕ್ರವಾಗಿದ್ದರೆ 12ನೆಯ ದಿನವಾಗಿರುತ್ತದೆ. ಅಂಡಾಣು ಫಲಿತವಾಗುವ ದಿನದ ಅವಧಿಯ ಲೆಕ್ಕ ಹಿಮ್ಮುಖವಾಗಿ ಮಾಡಬೇಕು ಎನ್ನುವುದೇ ಈ ಸಿದ್ಧಾಂತದ ತಾತ್ಪರ್ಯವಾಗಿದೆ.
ದೇಹದ ಉಷ್ಣ
ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸುವುದರಿಂದಲೂ ಅಂಡಾಣು ಬಿಡುಗಡೆಯ ದಿನವನ್ನು ಅಂದಾಜಿಸಬಹುದಾಗಿದೆ. ಬಿಬಿಟಿ ಎಂದು ಕರೆಯಲಾಗುವ ಬಾಸಲ್ ಬಾಡಿ ಟೆಂಪರೇಚರ್ ಅನ್ನು ಪರಿಶೀಲಿಸುತ್ತಿರಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯ ಉಷ್ಣಾಂಶ 96ರಿಂದ 99 ಡಿ.ಫ್ಯಾರನ್ಹೀಟ್ ಆಗಿರುತ್ತದೆ. ಅಂಡಾಣು ಬಿಡುಗಡೆಯಾಗುವ ದಿನದಲ್ಲಿ ಈ ಉಷ್ಣಾಂಶದಲ್ಲಿ ಸ್ವಲ್ಪ ಏರಿಕೆ ಕಂಡು ಬರುತ್ತದೆ. ಋತುಚಕ್ರದ ಅವಧಿಯವರೆಗೂ ಉಷ್ಣಾಂಶದಲ್ಲಿ ಏರಿಕೆ ಇರುತ್ತದೆ. ಹಾಗಾಗಿ ಪ್ರತಿದಿನವೂ ದೇಹದ ಉಷ್ಣಾಂಶವನ್ನು ಲೆಕ್ಕ ಹಾಕುತ್ತಿದ್ದಲ್ಲಿ ಸ್ವಲ್ಪ ಹೆಚ್ಚಾದಾಗ ಅದು ಅಂಡಾಣುವಿನ ಬಿಡುಗಡೆಯ ದಿನವೆಂದು ಅಂದಾಜಿಸಬಹುದಾಗಿದೆ. ಆ ಫಲವಂತಿಕೆಯ ಅಲ್ಪಾವಧಿಯನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕಾಗಿ ನೀವು ವಿಶೇಷ ಥರ್ಮಾಮೀಟರ್ ಒಂದನ್ನು ಖರೀದಿಸಬೇಕಾಗುತ್ತದೆ.
ಫಲವಂತಿಕೆಯ ಫಲಕ
ಒಂದು ವೇಳೆ ನಿಮ್ಮ ಋತುಚಕ್ರವು ನಿಯಮಿತವಾಗಿರದಿದ್ದಲ್ಲಿ ಅಂಡಾಣು ಬಿಡುಗಡೆಯ ಅಂದಾಜಿಸುವ ಕಿಟ್ಗಳು ನಿಮ್ಮ ಫಲವಂತಿಕೆಯ ದಿನಗಳನ್ನು ಅಂದಾಜಿಸಲು ಸಹಾಯಕವಾಗಿರುತ್ತವೆ. ಸಾಮಾನ್ಯವಾಗಿ ಎಲ್ಲ ಔಷಧಿ ಅಂಗಡಿಗಳಲ್ಲಿಯೂ ಈ ಕಿಟ್ಗಳು ದೊರೆಯುತ್ತವೆ. ಬೆಳಗಿನ ಮೊದಲ ಮೂತ್ರ ತಪಾಸಣೆಯಿಂದ ಹಾರ್ಮೋನ್ ಪ್ರಮಾಣವನ್ನು ಅಳೆಯುವುದರ ಮೂಲಕ ಅಂಡಾಣು ಬಿಡುಗಡೆಯನ್ನು ಅಂದಾಜಿಸಬಹುದಾಗಿದೆ. ಹೆಚ್ಚೂ ಕಮ್ಮಿ ಗರ್ಭಿಣಿಯಾಗಲು ಬಳಸುವ ಟೆಸ್ಟ್ ಕಿಟ್ನಂತೆಯೇ ಇರುತ್ತದೆ. ಅಷ್ಟೇ ಸರಳವೂ ನಿಖರವೂ ಆಗಿರುತ್ತದೆ. ಇನ್ನೊಂದು ಫಲವಂತಿಕೆಯ ಕಿಟ್ ಎಂಜಲಿನಲ್ಲಿರುವ ಈಸ್ಟ್ರೋಜನ್ ಪ್ರಮಾಣವನ್ನು ಅಥವಾ ಬೆವರಿನಲ್ಲಿ ಕ್ಲೋರೈಡ್ ಅಂಶದ ಮೂಲಕವೂ ಪತ್ತೆ ಹಚ್ಚಲಾಗುತ್ತದೆ.
ಮಾಹಿತಿಗೆ: 1800 208 4444
