ಕರ್ನಾಟಕ

ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್‌ ಪ್ರತಿತಂತ್ರ: ನಾಳೆ ಸಮಾಲೋಚನೆ

Pinterest LinkedIn Tumblr

bbmpಬೆಂಗಳೂರು: ಪಾಲಿಕೆಯ 76 ಸದಸ್ಯರನ್ನು ರೆಸಾರ್ಟ್‌ಗೆ ಕಳುಹಿಸದಿರಲು ಕಾಂಗ್ರೆಸ್‌ ಶನಿವಾರ ತೀರ್ಮಾನಿಸಿದೆ. ಬಿಜೆಪಿ ತನ್ನ ಸದಸ್ಯರಿಗೆ ಗಾಳ ಹಾಕಲಿದೆ ಎಂಬ ಆತಂಕದಿಂದ ಸದಸ್ಯರನ್ನು ರೆಸಾರ್ಟ್‌ಗೆ ಕಳುಹಿಸಲು ಪಕ್ಷ ಶುಕ್ರವಾರ ತೀರ್ಮಾನಿಸಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ನಡೆದ ಶಾಸಕರ, ಪಾಲಿಕೆ ಸದಸ್ಯರ ಹಾಗೂ ಸ್ಥಳೀಯ ಮುಖಂಡರ ಸಭೆ ನಡೆಯಿತು. ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನು ತನ್ನತ್ತ ಸೆಳೆಯಲು ಬಿಜೆಪಿ ಮಾಡುತ್ತಿರುವ ಪ್ರಯತ್ನಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಮೇಯರ್‌ ಚುನಾವಣೆ ವರೆಗೆ ಪಕ್ಷದ ಪಾಲಿಕೆ ಸದಸ್ಯರು ಏನು ಮಾಡಬೇಕು, ಏನು ಮಾಡಬಾರದು ಎಂಬ ಸೂಚನೆ ನೀಡಿತು.

ಅಪರಿಚಿತ ವ್ಯಕ್ತಿಗಳಿಂದ ಕರೆಗಳನ್ನು ಸ್ವೀಕರಿಸಬಾರದು. ಬಿಜೆಪಿ ಮುಖಂಡರು ಆಮಿಷ ಒಡ್ಡಲು ಪ್ರಯತ್ನಿಸಿದರೆ ಅದನ್ನು ರೆಕಾರ್ಡ್‌ ಮಾಡಿಕೊಳ್ಳಬೇಕು. ಸ್ಥಳೀಯ ಮುಖಂಡರ ಜತೆಗೆ ನಿರಂತರ ಸಂಪರ್ಕದಲ್ಲಿರಬೇಕು. ಮುಂದಿನ ಒಂದು ವಾರ ನಗರದಲ್ಲೇ ಇರಬೇಕು ಎಂಬ ಸೂಚನೆಯನ್ನು ಸಭೆಯಲ್ಲಿ ನೀಡಲಾಯಿತು.

‘ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸದಸ್ಯರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಅಗತ್ಯ ಇಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಅಲ್ಲದೆ ಸದಸ್ಯರ ಮೇಲೆ ಮುಖಂಡರಿಗೆ ನಂಬಿಕೆ ಇಲ್ಲ ಎಂಬ ಭಾವನೆ ಮೂಡುತ್ತದೆ ಎಂಬ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಯಿತು. ರೆಸಾರ್ಟ್‌ಗೆ ಹೋದರೆ ಪಕ್ಷದ ಇಮೇಜ್‌ಗೂ ಧಕ್ಕೆ ಬರುತ್ತದೆ ಎಂದು ಕೆಲವು ಮುಖಂಡರು ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಪಕ್ಷದಲ್ಲಿ ಭವಿಷ್ಯ ಉಜ್ವಲವಾಗಿದೆ. ಪಾಲಿಕೆಯ ಕೆಲವು ಸದಸ್ಯರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶನ ಮಾಡಲಾಗುವುದು. ಕೆಲವರಿಗೆ ನಿಗಮ ಹಾಗೂ ಮಂಡಳಿಗಳಲ್ಲಿ ಸ್ಥಾನ ನೀಡಲಾಗುವುದು ಎಂಬ ಭರವಸೆಯನ್ನು ಸಚಿವರು ನೀಡಿದರು ಎಂದು ಮೂಲಗಳು ತಿಳಿಸಿವೆ.

ಪಕ್ಷದ ಸದಸ್ಯರನ್ನು ಸೆಳೆಯಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದ್ದು, ಇದರ ವಿರುದ್ಧ ನಗರದಲ್ಲಿ ಸೋಮವಾರ ಪ್ರತಿಭಟಿಸಲು ನಿರ್ಧರಿಸಲಾಯಿತು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ‘ಕಾಂಗ್ರೆಸ್‌ ಸದಸ್ಯರನ್ನು ಸೆಳೆಯಲು ಬಿಜೆಪಿ ಸತತ ಪ್ರಯತ್ನ ಮಾಡುತ್ತಿದೆ.

ಬಿಜೆಪಿ ಮುಖಂಡರಿಗೆ ಆಪ್ತರಾಗಿರುವ ಪಕ್ಷೇತರ ವಿಧಾನ ಪರಿಷತ್‌ ಸದಸ್ಯರೊಬ್ಬರು ವಿಜಯನಗರ ಹಾಗೂ ಚಾಮರಾಜಪೇಟೆ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯ್ಕೆಯಾದ ಏಳು ಪಾಲಿಕೆ ಸದಸ್ಯರಿಗೆ ಕರೆ ಮಾಡಿದ್ದಾರೆ. ಮೇಯರ್‌ ಚುನಾವಣೆ ವೇಳೆಗೆ ಗೈರು ಹಾಜರಾಗಬೇಕು. ಅದಕ್ಕೆ ಹಣ ನೀಡಲಾಗುವುದು ಎಂಬ ಆಮಿಷ ಒಡ್ಡಿದ್ದಾರೆ’ ಎಂದು ಆರೋಪಿಸಿದರು. ಆದರೆ, ಅವರು ಸದಸ್ಯರ ಹೆಸರು ಹೇಳಲು ನಿರಾಕರಿಸಿದರು.
*
ಮಡಿಕೇರಿಯಲ್ಲಿ ರೆಸಾರ್ಟ್‌ ಕಾಯ್ದಿರಿಸಿದ ಶಾಸಕ
ನಗರದ ಕಾಂಗ್ರೆಸ್‌ ಶಾಸಕರೊಬ್ಬರು ಮಡಿಕೇರಿಯಲ್ಲಿ ಎರಡು ರೆಸಾರ್ಟ್‌ ಗಳನ್ನು ಕಾಯ್ದಿರಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಭೆ ಮುಗಿದ ನಂತರ  72 ಸದಸ್ಯರನ್ನು ಅಲ್ಲಿಗೆ ಕರೆದೊಯ್ಯಲಿದ್ದಾರೆ ಎಂದು ತಿಳಿದು ಬಂದಿದೆ.

Write A Comment