ರಾಷ್ಟ್ರೀಯ

ಕಾವೇರಿ ಕಲಹ: ಪ್ರಧಾನಿ ಮಧ್ಯಪ್ರವೇಶಕ್ಕೆ ತಮಿಳುನಾಡು ಸಿ.ಎಂ. ಜಯಾ ಪತ್ರ

Pinterest LinkedIn Tumblr

jayayayayaಚೆನ್ನೈ (ಪಿಟಿಐ): ‘ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನಂತೆ ತಮಿಳುನಾಡಿಗೆ ಬಿಡಬೇಕಿದ್ದ ನೀರನ್ನು ಕರ್ನಾಟಕ ಉದ್ದೇಶಪೂರ್ವಕವಾಗಿ ತಡೆ ಹಿಡಿದಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಪಿಸಿದ್ದಾರೆ.

ಈ ಸಂಬಂಧ ಸೆ. 4ರಂದು ಪ್ರಧಾನಿಗೆ ಬರೆದ ಪತ್ರವನ್ನು ಅವರು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ‘ತೀರ್ಪಿನಂತೆ ಕರ್ನಾಟಕ ಕಳೆದ ಮೂರು ತಿಂಗಳಲ್ಲಿ 94 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಆಗಸ್ಟ್‌ 31ರವರೆಗೆ 66.443 ಟಿಎಂಸಿ ಮಾತ್ರ ಬಿಟ್ಟಿದ್ದು, 27.557 ಟಿಎಂಸಿ ನೀರಿನ ಕೊರತೆಯಾಗಿದೆ’ ಎಂದು ದೂರಿದ್ದಾರೆ.

‘ಕರ್ನಾಟಕ ಬಳಿ ಸಾಕಷ್ಟು ನೀರಿನ  ಸಂಗ್ರಹ ಇದ್ದರೂ ಬಿಡುಗಡೆ ಮಾಡಿಲ್ಲ.  ಈ ಮೂಲಕ ಅದು ಕಾವೇರಿ ನ್ಯಾಯ ಮಂಡಳಿ ತೀರ್ಪನ್ನು ಉಲ್ಲಂಘಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಅಲ್ಪಾವಧಿ ಬೆಳೆಗೆ (ಕುರುವೈ) ಮೆಟ್ಟೂರು ಅಣೆಕಟ್ಟೆಯಿಂದ ಜೂನ್‌ 12ರಿಂದಲೇ ನೀರು ಬಿಡಬೇಕಿತ್ತು.  ಆದರೆ ಕರ್ನಾಟಕ ನೀರು ಬಿಡದ ಕಾರಣ ಕಡೆಯ ಪಕ್ಷ ಸಾಂಬಾ ಬೆಳೆಗೆ ಅನುಕೂಲವಾಗಲಿ ಎಂದು  ಅಣೆಕಟ್ಟೆಯಲ್ಲಿ ಲಭ್ಯವಿದ್ದ 60.411 ಟಿಎಂಸಿಯಲ್ಲಿಯೇ ಆಗಸ್ಟ್‌ 9ರಿಂದ ನೀರು ಬಿಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಕಾವೇರಿ ನದಿ ತೀರದ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಸಾಂಬಾ ಬೆಳೆ ರಕ್ಷಣೆಗೆ ಜನವರಿಯವರೆಗೆ  ನೀರಿನ ಅಗತ್ಯವಿದೆ. ಆದರೆ ಸದ್ಯ ಮೆಟ್ಟೂರಿನಲ್ಲಿ 50.552 ಟಿಎಂಸಿ ನೀರು ಮಾತ್ರ ಇದೆ. ಕರ್ನಾಟಕದ ಪ್ರಮುಖ ನಾಲ್ಕು ಜಲಾಶಯಗಳಲ್ಲಿ ಸಾಕಷ್ಟು ನೀರು ಇದ್ದು, ಅದು ತನ್ನ ವ್ಯಾಪ್ತಿಯ  ನೀರಾವರಿ ಕಾಲುವೆಗಳಿಗೆ ಜುಲೈನಿಂದಲೇ ನೀರು ಬಿಟ್ಟಿದೆ’ ಎಂದು ತಿಳಿಸಿದ್ದಾರೆ.

‘ಕಾವೇರಿ ನ್ಯಾಯ ಮಂಡಳಿ ತೀರ್ಪನ್ನು ಜಾರಿಗೆ ತರಲು ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ರಚಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

Write A Comment