ಕರ್ನಾಟಕ

ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು

Pinterest LinkedIn Tumblr

Siddddduuuಮೈಸೂರು: ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು 25 ಟಿಎಂಸಿ ನೀರು ಕೇಳಿದ್ದಾರೆ. ಅಷ್ಟೊಂದು ನೀರು ಕೆಆರ್‌ಎಸ್‌ ಜಲಾಶಯದಲ್ಲಿ ಇಲ್ಲ. ಎಲ್ಲಿಂದ ಕೊಡಲು ಸಾಧ್ಯವಾಗುತ್ತದೆ? ಜೂನ್‌– ತಿಂಗಳಲ್ಲಿ ನೀರು ಬಿಟ್ಟಿದ್ದೇವೆ. ಸಂಕಷ್ಟ ಸೂತ್ರವನ್ನು ಅರ್ಥ ಮಾಡಿಕೊಂಡು ಅನುಸರಿಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಲವತ್ತು ವರ್ಷಗಳ ಬಳಿಕ ಭೀಕರ ಬರಗಾಲ ಎದುರಾಗಿದೆ. ರಾಜ್ಯದ ಜಲಾಶಯಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ. ಇರುವ ನೀರು ಕುಡಿಯುವುದಕ್ಕೆ ಮಾತ್ರ ಸಾಕಾಗುವಷ್ಟಿದೆ ಎಂದರು.

ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಅವರ ‘ಸಿದ್ದರಾಮಯ್ಯ ಅವರು ಮೈಸೂರಿಗೆ ಮಾತ್ರ ಸಿಎಂ ಆಗಿದ್ದಾರೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದ್ದರೆ, ಅದಕ್ಕೆ ಕಾರಣ ಈ ಮುಂಚೆ ಇದ್ದ ಬಿಜೆಪಿ ಸರ್ಕಾರದ ದುರಾಡಳಿತವೇ ಕಾರಣ’ ಎಂದು ಕುಟುಕಿದರು.
*
ಬಂದ್‌ ಹಿಂದೆ ದುರುದ್ದೇಶ– ಸಿ.ಎಂ
ಮೈಸೂರು: ರಾಜ್ಯದಲ್ಲಿ ಬಂದ್‌ಗೆ ಕರೆ ನೀಡುವಂಥ ಪರಿಸ್ಥಿತಿ ಇಲ್ಲದೇ ಇದ್ದರೂ, ಕೆಲವು ರಾಜಕೀಯ ವ್ಯಕ್ತಿಗಳು ಸ್ವಪ್ರತಿಷ್ಠೆ ಹಾಗೂ ದುರುದ್ದೇಶದಿಂದ ಬಂದ್‌ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಬಂದ್‌ ಮಾಡಬಾರದು. ಇದರಿಂದ ನಾಗರಿಕರಿಗೆ ಅತೀವ ತೊಂದರೆ ಆಗುತ್ತದೆ. ಬಂದ್‌ ಮಾಡುವಂತಹ ಪ್ರಮೇಯವೇ ಇಲ್ಲದಿರುವಾಗ ಏಕೆ, ಈ ರೀತಿ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಹಸ್ತಕ್ಷೇಪ ಇಲ್ಲ: ಬಿಬಿಎಂಪಿ ಮೇಯರ್‌ ಆಯ್ಕೆ ಕುರಿತು ಮಾತನಾಡಿದ ಅವರು, ‘ಈ ಬಗ್ಗೆ ಸ್ಥಳೀಯ ನಾಯಕರು ಹಾಗೂ ನೂತನವಾಗಿ ಆರಿಸಿ ಬಂದಿರುವ ಪಾಲಿಕೆ ಸದಸ್ಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನವೇ ಅಂತಿಮ. ಇದರಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಗುರುವನ್ನು ನೆನೆದ ಸಿದ್ದರಾಮಯ್ಯ: ಶಿಕ್ಷಕರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗುರು ರಾಜಪ್ಪ ಅವರನ್ನು ಸ್ಮರಿಸಿಕೊಂಡರು.
‘ಶಾಲೆಯಿಂದ ದೂರ ಉಳಿದಿದ್ದ ನನ್ನನ್ನು ರಾಜಪ್ಪ ಅವರು ನೇರವಾಗಿ 5ನೇ ತರಗತಿಗೆ ಸೇರಿಸಿದರು. ಅವರು ಇಲ್ಲದೇ ಇದ್ದರೆ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಕೃತಜ್ಞತೆ ಸಲ್ಲಿಸಿದರು.

Write A Comment