ಕರ್ನಾಟಕ

‘ಸುಳ್ಳು ವದಂತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿಲ್ಲ: ಆರ್.ಅಶೋಕ್

Pinterest LinkedIn Tumblr

ashok dy cmಬೆಂಗಳೂರು, ಸೆ. 5: ಬಿಜೆಪಿ ಪಕ್ಷ ಯಾವುದೇ ರೀತಿಯ ಆಪರೇಷನ್ ಕಮಲ ಹಾಗೂ ಕುದುರೆ ವ್ಯಾಪಾರಕ್ಕೆ ಮುಂದಾಗಿಲ್ಲ. ಈ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ನಗರದ ಕೆಂಪೇಗೌಡ ಪ್ರತಿಮೆ ಯಿಂದ ರಾಜಭವನದವರೆಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ವೌನ ಪ್ರತಿಭಟನ ರ್ಯಾಲಿಯ ನೇತೃತ್ವ ವಹಿಸಿ ಮಾತನಾಡಿದ ಅವರು, ಆಪರೇಷನ್ ಕಮಲ ಎಂದು ಹೇಳಿ ಬಿಜೆಪಿ ಪಕ್ಷದ ವಿರುದ್ಧ ಇಲ್ಲ-ಸಲ್ಲದ ಆಪಾದನೆ ಮಾಡಲಾಗುತ್ತಿದೆ. ಅಲ್ಲದೆ, ಈ ರೀತಿ ಹೇಳಿಕೆ ನೀಡಿರುವ ಕಾಂಗ್ರೆಸ್ ಕಾರ್ಪೊರೇಟರ್ ಪದ್ಮಾವತಿಯವರಿಗೆ ಲೀಗಲ್ ನೋಟಿಸ್ ನೀಡಲಾಗುವುದು, ಅವರ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಬಿಜೆಪಿ ಪಕ್ಷವು ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿಲ್ಲ. ಇದನ್ನು ಕಾಂಗ್ರೆಸ್ ಪಕ್ಷವೇ ಹೊರ ತಂದು ಲಾಭ ಪಡೆಯುತ್ತಿದೆ. ಈಗಾಗಲೇ ಕೊಚ್ಚಿ ರೆಸಾರ್ಟ್‌ನಲ್ಲಿ ಕಾರ್ಪೊರೇಟರ್‌ಗಳನ್ನು ಬಂಧಿಸಿಡಲಾಗಿದೆ. ಆದರೆ, ಇಂತಹ ಮೋಸ ದಾಟದ ಅಧಿಕಾರಕ್ಕಾಗಿ ಬಿಜೆಪಿ ಮುಂದಾಗಿಲ್ಲ. ನಾವು ಹೋರಾಟದ ಮೂಲಕವೇ ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನವನ್ನು ಪಡೆಯತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯಪಾಲರಿಗೆ ದೂರು: ಏಕಾಏಕಿ ಈ ಬಾರಿ ಮೇಯರ್-ಉಪಮೇಯರ್ ಚುನಾವಣೆಯ ಪಟ್ಟಿಯಲ್ಲಿ ಹೊಸಬರ ಹೆಸರನ್ನು ಉಲ್ಲೇಖಿಸಲಾಗಿದ್ದು, ಇದನ್ನು ಈ ಕೂಡಲೇ ರದ್ದುಗೊಳಿಸಬೇಕು. ಅದೇ ರೀತಿ, ಹಿಂಬಾಗಿಲಿ ನಿಂದ ಅಧಿಕಾರ ಹಿಡಿಯಲು ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಲಿಖಿತ ರೂಪದ ಮನವಿ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಕಾಂಗ್ರೆಸ್ ಷಡ್ಯಂತ್ರ:
ಮತದಾನದ ಸಂಖ್ಯೆ ಹೆಚ್ಚಿಸಲು ಯಾರನ್ನು ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆಯೋ ಅವರೇ ಇದು ನಮ್ಮ ಹಕ್ಕಲ್ಲ ಎಂದಿದ್ದಾರೆ ಎಂದು ಮಾಜಿ ಸಚಿವ ಸೋಮಣ್ಣ ಆರೋಪಿದರು. ಈ ಹಿಂದೆ ಕೆಲವರು ಬೇರೆ ಕಡೆ ಮತ ಚಲಾಯಿಸಿದ್ದಾರೆ. ಆದರೆ ಪುನಃ ಪಾಲಿ ಕೆಯ ಚುನಾವಣೆಯಲ್ಲಿಯೂ ಮತ ಚಲಾ ಯಿಸುವ ಅವಕಾಶ ನೀಡಲು ಕಾಂಗ್ರೆಸ್ ಸರಕಾರ ಮುಂದಾಗಿದೆ. ಅಲ್ಲದೆ, ಕೇವಲ ಎರಡು ದಿನಗಳಲ್ಲಿ ಹೊಸಬರ ಹೆಸರನ್ನು ಸೇರ್ಪಡೆ ಗೊಳಿಸಿರುವ ಪ್ರವೃತ್ತಿಯನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಭಾರೀ ಮಾರಕವಾಗುವ ಸಾಧ್ಯತೆಯಿದೆ. ಇದನ್ನು ತಡೆಯಬೇಕೆಂದು ಒತ್ತಾಯಿಸಲು ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಗಿದೆ ಎಂದು ಸೋಮಣ್ಣ ತಿಳಿಸಿದರು.

Write A Comment