ಬೆಂಗಳೂರು, ಸೆ.1: ಬಿಬಿಎಂಪಿ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಪಡೆದಿದ್ದರೂ ಅಧಿಕಾರ ಸೂತ್ರ ಹಿಡಿಯಲು ಮೈಮರೆತಿದ್ದುದೇ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ರವರನ್ನು ಆರ್.ಎಸ್.ಎಸ್. ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರ ಹಿಡಿಯಲು ಪಕ್ಷೇತರರು ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದರೂ, ಅವರನ್ನು ಕಡೆಗಣಿಸಿದ್ದೇಕೆ ಎಂದು ದೂರವಾಣಿ ಮೂಲಕ ಸಂಪರ್ಕಿಸಿದ ಆರ್.ಎಸ್.ಎಸ್. ಮುಖಂಡರು ಅಶೋಕ್ ರವರಿಗೆ ಬೆವರಿಳಿಸಿದ್ದಾರೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷೇತರರನ್ನು ಬಳಸಿಕೊಳ್ಳುವ ಯತ್ನ ನಡೆಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಣ ಮೈತ್ರಿ ವಿಚಾರ ಮುಂಚೂಣಿಗೆ ಬರುತ್ತಲೆ ಇರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ.
ಚುನಾವಣೆ ಬಳಿಕ ಗೆದ್ದ ಹುಮ್ಮಸ್ಸಿನಲ್ಲಿ ಮೈಮರೆತ ನೀವು ಮನೆ ಬಾಗಿಲಿಗೆ ಬಂದ ಪಕ್ಷೇತರ ಸದಸ್ಯರನ್ನು ಕಡೆಗಣಿಸಿದ್ದೇಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ನೀವು ಅಧಿಕಾರ ಹಿಡಿಯುವ ಬಗ್ಗೆ ನಿಗಾ ವಹಿಸದಿದ್ದುದೇ ಜೆಡಿಎಸ್ ರಾಜಕೀಯ ಆಟ ಮುಂದುವರೆಸಲು ಕಾರಣವಾಗಿದೆ. ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ವಿವರ ನೀಡಬೇಕು ಎಂದು ತಿಳಿಸಿದ್ದಾರೆ.
