ಧಾರವಾಡ: ‘ಕಲಬುರ್ಗಿ (77) ಅವರ ಹಣೆಗೆ ತೀರಾ ಸಮೀಪದಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಕುಸಿದುಬಿದ್ದ ಅವರನ್ನು ಕೂಡಲೇ ಸಂಬಂಧಿಗಳು ಆಸ್ಪತ್ರೆಗೆ ಸೇರಿಸಿದರು. ಆದರೆ, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು’ ಎಂದು ಧಾರವಾಡ ಪೊಲೀಸರು ಹೇಳಿದ್ದಾರೆ.
‘ಗುಂಡಿನ ಮೊರೆತ ಕೇಳಿದ ಬೆನ್ನಲ್ಲೇ, ಕಲಬುರ್ಗಿ ಅವರ ಮನೆಯಿಂದ ಓಡಿಬಂದ ಇಬ್ಬರು ಅಪರಿಚತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ಆಧರಿಸಿ, ಆರೋಪಿಗಳ ರೇಖಾಚಿತ್ರ ಸಿದ್ಧಪಡಿಸಲಾಗುತ್ತಿದೆ. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಭಾನುವಾರ ಸಂಜೆ 4 ಗಂಟೆಯಿಂದ ಕರ್ನಾಟಕ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಅವರು ತಿಳಿಸಿದರು.
