ಮನೋರಂಜನೆ

ಸಾನಿಯಾಗೆ ‘ಖೇಲ್‌ ರತ್ನ’ ಪ್ರದಾನ

Pinterest LinkedIn Tumblr

Khel Ratna to tennis ace Sania Mirza

ನವದೆಹಲಿ: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿದವರಿಗೆ ನೀಡುವ ‘ರಾಜೀವ್‌ ಗಾಂಧಿ ಖೇಲ್‌ ರತ್ನ’ ಗೌರವಕ್ಕೆ ಭಾಜನರಾದರು.

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸಾನಿಯಾಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಪ್ರಶಸ್ತಿ ಪದಕ, ಪ್ರಮಾಣಪತ್ರ ಮತ್ತು ₹7.5 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಸಾನಿಯಾ ಈ ಗೌರವಕ್ಕೆ ಭಾಜನರಾದ ದೇಶದ ಎರಡನೇ ಟೆನಿಸ್‌ ಕ್ರೀಡಾಪಟು ಎನಿಸಿದರು. ಲಿಯಾಂಡರ್‌ ಪೇಸ್ ಈ ಮೊದಲು ಈ ಪ್ರಶಸ್ತಿ ಪಡೆದಿದ್ದರು.

17 ಮಂದಿಗೆ ‘ಅರ್ಜುನ’: ಶೂಟರ್‌ ಜಿತು ರಾಯ್‌, ಹಾಕಿ ಆಟಗಾರ ಪಿ.ಆರ್‌. ಶ್ರೀಜೇಶ್‌ ಸೇರಿದಂತೆ 17 ಮಂದಿ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ಪದಕ, ಪ್ರಮಾಣ ಪತ್ರ ಮತ್ತು ₹ 5 ಲಕ್ಷ ನಗದು ಪುರಸ್ಕಾರವನ್ನು ಒಳಗೊಂಡಿದೆ.

ಶ್ರೀಲಂಕಾ ಪ್ರವಾಸದಲ್ಲಿರುವ ಕ್ರಿಕೆಟಿಗ ರೋಹಿತ್‌ ಶರ್ಮಾ, ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರುವ ಬಾಕ್ಸರ್‌ ಮಂದೀಪ್‌ ಜಾಂಗ್ರಾ ಮತ್ತು ಏಷ್ಯನ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಕರ್ನಾಟಕದ ಅಥ್ಲೀಟ್‌ ಎಂ.ಆರ್‌.ಪೂವಮ್ಮ ಸಮಾರಂಭಕ್ಕೆ ಹಾಜರಾಗಿರಲಿಲ್ಲ.

ಅಮೀನ್‌ಗೆ ದ್ರೋಣಾಚಾರ್ಯ: ಭಾರತದ ಈಜು ಕೋಚ್‌ ಬೆಂಗಳೂರಿನ ನಿಹಾರ್‌ ಅಮೀನ್‌ ಅವರು ಸಮಾರಂಭ ದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ಯಾರಾ ಈಜುಪಟು ಕರ್ನಾಟಕದ ಶರತ್‌ ಗಾಯಕ್ವಾಡ್‌ ಅವರು ಅರ್ಜುನ ಪ್ರಶಸ್ತಿಗೆ ಭಾಜನರಾದರು. ‘ನಿಮಗೆ ಅಭಿನಂದನೆಗಳು. ನಿಮ್ಮಿಂದ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರದ ಸಾಧನೆ ಮೂಡಿಬರಲಿ’ ಎಂದು ಸಾನಿಯಾ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅಭಿನಂದಿಸಿದ್ದಾರೆ.

* ಇದು ನನ್ನ ಪಾಲಿನ ಬಹುದೊಡ್ಡ ಗೌರವ. ಸಾಧನೆಗೆ ಸಿಕ್ಕ ಫಲ. ಈ ವರ್ಷ ನನ್ನ ಪಾಲಿಗೆ ಸ್ಮರಣೀಯವಾದುದು. ಈ ಪ್ರಶಸ್ತಿಯಿಂದ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ
– ಸಾನಿಯಾ ಮಿರ್ಜಾ

Write A Comment