ಬೆಂಗಳೂರು: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಘವೇಶ್ವರ ಸ್ವಾಮೀಜಿ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ‘ಸ್ವಾಮೀಜಿ ಅವರು 2006 ರಿಂದ 2012ರವರೆಗೆ ನನ್ನ ಮೇಲೆ ಹಲವು ಸಲ ಅತ್ಯಾಚಾರ ಎಸಗಿದ್ದಾರೆ’ ಎಂದು 24 ವರ್ಷದ ಮಹಿಳೆಯೊಬ್ಬರು ಗಿರಿನಗರ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.
ದೂರಿನ ವಿವರ: ‘ಹೊಸನಗರದ ರಾಮಚಂದ್ರಾಪುರ ಮಠದ ಹಾಸ್ಟೆಲ್‌ನಲ್ಲೇ ಉಳಿದುಕೊಂಡು ಎಂಟನೇ ತರಗತಿ ಓದುತ್ತಿದ್ದೆ. ಆಗಿನಿಂದಲೂ ಸ್ವಾಮೀಜಿ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ಎಸ್ಸೆಸ್ಸೆಲ್ಸಿ ಓದುವಾಗ ಕೆಲ ದಿನಗಳ ಕಾಲ ಅನಾರೋಗ್ಯದಿಂದ ನರಳುತ್ತಿದ್ದೆ. ಆಗ ಶ್ರೀರಾಮನ ಧ್ಯಾನ ಮಾಡಿದರೆ ಸರಿ ಹೋಗುತ್ತದೆ ಎಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದರು’.
‘ವಿಷಯ ಬಹಿರಂಗಪಡಿಸಿದರೆ ಶ್ರೀರಾಮನ ಶಾಪ ತಟ್ಟುತ್ತದೆ. ನೀನು ನಾಶವಾಗುತ್ತಿಯಾ ಎಂದು ಬೆದರಿಕೆ ಹಾಕಿದ್ದರು. ಹಾಸ್ಟೆಲ್ ತೊರೆದು ಮನೆಗೆ ಹೋಗಲೂ ಬಿಡುತ್ತಿರಲಿಲ್ಲ’.
‘ಶಿಕ್ಷಣ ಮುಂದುವರಿಸಬೇಕು ಎಂದು ಪರಿಪರಿಯಾಗಿ ಬೇಡಿಕೊಂಡರೂ ಒಪ್ಪದ ಸ್ವಾಮೀಜಿ, ಮಠದಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಜತೆ 18ನೇ ವಯಸ್ಸಿನಲ್ಲೇ ನನ್ನ ಮದುವೆ ಮಾಡಿಬಿಟ್ಟರು’.
‘ಕೆಲ ದಿನಗಳಲ್ಲೇ ದಾಂಪತ್ಯ ಮುರಿದು ಬಿತ್ತು. ಆ ನಂತರದ ಅವಧಿಯುದ್ದಕ್ಕೂ ಸ್ವಾಮೀಜಿ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ. 2012ರಲ್ಲಿ ಮಠದ ಗಿರಿನಗರ ಶಾಖೆಗೂ ಕರೆದುಕೊಂಡು ಬಂದು ಅತ್ಯಾಚಾರ ಎಸಗಿದ್ದರು’. ‘ಇದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದೆ. ಅನ್ಯಾಯ ಮಾಡಿದ ಸ್ವಾಮೀಜಿಗೆ ಶಿಕ್ಷೆಯಾಗಬೇಕು ಎಂಬ ಕಾರಣದಿಂದ ಈಗ ದೂರು ಕೊಡುತ್ತಿದ್ದೇನೆ’.
ಇದು ಸುಳ್ಳು
ಸ್ವಾಮೀಜಿಯ ಮೇಲೆ ಆರೋಪ ಸುಳ್ಳು. ಕಳೆದ ಸಲವೂ ಚಾತುರ್ಮಾಸ ಸಂದರ್ಭದಲ್ಲಿ ಇದೇ ರೀತಿ ಸುಳ್ಳು ಆರೋಪ ಮಾಡಲಾಗಿತ್ತು ಎಂದು ರಾಮಚಂದ್ರಾಪುರ ಮಠದ ಪ್ರಕಟಣೆ ತಿಳಿಸಿದೆ.
