ಬೆಂಗಳೂರು, ಆ.30: ಬಿಬಿಎಂಪಿ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿ ಖಚಿತವಾಗುತ್ತಿದ್ದಂತೆ ಕೈ ಪಾಳಯದಲ್ಲಿ ಮೇಯರ್ ಗಿರಿಗೆ ಲಾಬಿ ಆರಂಭವಾಗಿದೆ. ಕಳೆದ ಬಾರಿ ಪ್ರತಿಪಕ್ಷದ ನಾಯಕರಾಗಿದ್ದ ಮಂಜುನಾಥರೆಡ್ಡಿ , ಜಯನಗರ ಪೂರ್ವ ವಾರ್ಡ್ನ ಸದಸ್ಯ ಆರ್.ಗೋವಿಂದರಾಜು, ಮಹಾಲಕ್ಷ್ಮಿಪುರ ವಾರ್ಡ್ನ ಕೇಶವಮೂರ್ತಿ, ಮತ್ತೊಬ್ಬ ಹಿರಿಯ ಸದಸ್ಯ ಎಂ.ಕೆ.ಗುಣಶೇಖರ್ ಹಾಗೂ ಶಂಕರಮಠ ವಾರ್ಡ್ನ ಎಂ.ಶಿವರಾಜು ನಡುವೆ ಪೈಪೋಟಿ ತೀವ್ರಗೊಂಡಿದೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗದವರಿಗೆ ಮೇಯರ್ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದರೆ ಸಾಮಾನ್ಯ ವರ್ಗದ ಮಂಜುನಾಥರೆಡ್ಡಿ, ಕೇಶವಮೂರ್ತಿ ಹಾಗೂ ಗೋವಿಂದರಾಜು ನಡುವೆ ಬಿಗ್ ಫೈಟ್ ನಡೆಯುವುದು ಖಚಿತ. ಮೂರು ಬಾರಿ ಗೆದ್ದಿರುವ ಮಂಜುನಾಥರೆಡ್ಡಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಗಾಡ್ಫಾದರ್ ಆಗಿದ್ದರೆ, ವಾರ್ತಾ ಸಚಿವ ಆರ್.ರೋಷನ್ಬೇಗ್ ಅವರ ಬಲಗೈ ಭಂಟ ಗುಣಶೇಖರ್ ಅವರು ಮೂರು ಬಾರಿ ಗೆಲುವು ಸಾಧಿಸಿದ್ದಾರೆ.
ಗೋವಿಂದರಾಜು ಅವರು ಮೂರು ಬಾರಿ ಸದಸ್ಯರಾಗಿ ಆರಿಸಿ ಬಂದಿದ್ದರೂ ಅವರು ಬೇರೆ ಪಕ್ಷದಿಂದ ವಲಸೆ ಬಂದಿರುವುದು ಅವರ ಆಸೆಗೆ ತಣ್ಣೀರೆರಚಿದರೂ ಆಶ್ಚರ್ಯ ಪಡುವಂತಿಲ್ಲ.
ಮಹಾಲಕ್ಷ್ಮಿಪುರ ವಾರ್ಡ್ನ ಕೇಶವಮೂರ್ತಿಗೆ ಅವಕಾಶಗಳಿರುವ ಸಾಧ್ಯತೆಯಿದ್ದರೂ ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಪಕ್ಷದಿಂದ ಅಮಾನತುಗೊಂಡಿದ್ದು ಮಾರಕವಾಗಬಹುದು.
ಮಹಾಲಕ್ಷ್ಮಿ ಪುರದಲ್ಲಿ ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿರುವ ಶಂಕರಮಠ ವಾರ್ಡ್ನ ಎಂ.ಶಿವರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವುದು ಅನುಕೂಲವಾಗುವ ಸಾಧ್ಯತೆಯಿದೆ. ಆದರೆ, ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಸ್ಥಾನವನ್ನು ಆ ವರ್ಗದವರಿಗೆ ನೀಡಬೇಕು ಎಂಬ ಕೂಗು ಪ್ರಬಲವಾದರೆ, ಆ ವರ್ಗವನ್ನು ಪ್ರತಿನಿಧಿಸುವ ಮಂಜುನಾಥರೆಡ್ಡಿ, ಕೇಶವಮೂರ್ತಿ ಅಥವಾ ಗೋವಿಂದರಾಜು ಮೂವರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ಸಿಕ್ಕರೂ ಸಿಗಬಹುದು.