ಕನ್ನಡ ವಾರ್ತೆಗಳು

ಅಕ್ರಮ ಗೋ ಸಾಗಾಣಿಕೆ ಮತ್ತು ಗೋ ಕಳ್ಳತನಕ್ಕೆ ಜಿಲ್ಲೆಯಲ್ಲಿ ಕಡಿವಾಣ ಹಾಕ್ತೇವೆ: ಉಡುಪಿ ಎಸ್ಪಿ ಕೆ. ಅಣ್ಣಾಮಲೈ

Pinterest LinkedIn Tumblr

ASP_Annamalai_Kundapura (1)

ಉಡುಪಿ: ಕಳೆದ 2-3 ತಿಂಗಳುಗಳಿಂದೀಚೆಗೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಈ ವಿಷಯವನ್ನು ಇಲಾಖೆ ಬಹಳ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಶೀಘ್ರವೇ ಜಿಲ್ಲೆಯಲ್ಲಿ ಈ ಚಟುವಟಿಕೆಗಳಿಗೆ ಬ್ರೇಕ್ ಹಾಕಲಿದ್ದೇವೆ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಹೇಳಿದ್ದಾರೆ.

ಕುಂದಾಪುರದಲ್ಲಿ ‘ಕನ್ನಡಿಗ ವರ್ಲ್ಡ್‘ ಜೊತೆ ಮಾತನಾಡಿದ ಅವರು, ಪೊಲೀಸರು ಈ ಬಗ್ಗೆ ಚೆಕ್ ಪೋಸ್ಟ್ ಮೊದಲಾದ ಕೆಲಸಗಳನ್ನು ಮಾಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದನ ಕಳ್ಳತನದ ಬಗ್ಗೆ ಈ ಹಿಂದೆ ಪ್ರಕರಣವಿರುವ 137  ಜನರನ್ನು ಠಾಣೆಗೆ ಕರೆಯಿಸಿ ಪರೇಡ್ ನಡೆಸಲಾಗಿದೆ. ಅವರ ಬಳಿ ಸಂಪೂರ್ಣ ಮಾಹಿತಿ ಪಡೆದು ಖಡಕ್ ಎಚ್ಚರಿಕೆಯನ್ನು ನೀಡಿದ್ದೆವೆ. ಕುಂದಾಪುರ, ಬೈಂದೂರು, ಕಾಪು, ಕಾರ್ಕಳ ಕೊಲ್ಲೂರು ಭಾಗಗಳಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ಮತ್ತು ಕಳ್ಳತನ ಕ್ರತ್ಯಗಳು ಜಾಸ್ಥಿ ನಡೆಯುತ್ತಿದೆ ಎಂದರು.

ಚೆಕ್ ಪೋಸ್ಟ್ ಮಾಡಿದ್ದೇವೆ: ಅಕ್ರಮ ಗೋ ಸಾಗಾಟ ಕ್ರತ್ಯವನ್ನು ತಡೆಯಲು ಈಗಾಗಲೇ ಚೆಕ್ ಪೋಸ್ಟ್ ಮಾಡಿದ್ದು ಅಲ್ಲಿರುವ ಪೊಲೀಸರಿಗೆ ಶಸ್ತ್ರಗಳನ್ನು ನೀಡಲಾಗುತ್ತದೆ. ತಪ್ಪಿಸಿಕೊಳ್ಳುವ ಬರದಲ್ಲಿ ಪೊಲೀಸರ ಮೇಲೆಯೂ ಆಕ್ರಮಣಕ್ಕೆ ಮುಂದಾಗಿರುವ ಬಗ್ಗೆ ಈಗಾಗಲೇ ತಿಳಿದಿದ್ದೇವೆ. ಒಂದೊಮ್ಮೆ ಗೋಕಳ್ಳರು ಪೊಲಿಸರ ಮೇಲೆಯೇ ಆಕ್ರಮಣಕ್ಕೆ ಮುಂದಾದರೇ ಆ ಸಂದರ್ಭ ಆತ್ಮರಕ್ಷಣೆಗಾಗಿ ಸೂಕ್ತ ಕ್ರಮವನ್ನೇ ಕೈಗೊಳ್ಳುತ್ತೇವೆ ಎಂದರು.

ಇನ್ನು ಈ ವಿಚಾರವಾಗಿ ರಚಿಸಲಾದ ವಿಶೇಷ ತಂಡಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ರಾತ್ರಿ ವೇಳೆ ಕಡ್ಡಾಯವಾಗಿ ರೌಂಡ್ಸ್‌ ನಡೆಸುವಂತೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಅಕ್ರಮ ಗೋ ಸಾಗಾಣಿಕೆಗಳಲ್ಲಿ ಭಾಗಿಯಾಗಿದ್ದವರ ಪೆರೇಡನ್ನು ನಡೆಸುತ್ತಿದ್ದು, ಪ್ರಸ್ತುತ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ.

ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳ ಬಗ್ಗೆ ತಮಗೆ ಏನಾದರೂ ಮಾಹಿತಿ ಇದ್ದಲ್ಲಿ, ಯಾವುದೇ ಸಮಯದಲ್ಲಾದರೂ ಮಾಹಿತಿಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯ (ಕಂಟ್ರೋಲ್ ರೂಂ) ದೂರವಾಣಿ 100 ಅಥವಾ 0820-2526444 ಗೆ ಕರೆ ಮಾಡಿ ನೀಡಬಹುದು ಎಂದಿದ್ದಾರೆ.

Write A Comment