ಮಂಗಳೂರು,ಅಗಸ್ಟ್.30:ಮಂಗಳೂರು ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದ.ಕ. ಜಿಲ್ಲಾ ಘಟಕದ ವತಿಯಿಂದ ನಿರ್ಮಾಣಗೊಂಡಿರುವ `ನಂದಿನಿ’ ಸರಕಾರಿ ನೌಕರರ ನೂತನ ಸಭಾಭವನದ ಉದ್ಘಾಟನಾ ಸಮಾರಂಭ ಬಾನುವಾರ ಜರಗಿತು.
ನೂತನ ಸಭಾಭವನ ಉದ್ಘಾಟಿಸಿದ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವವರ ಸಂಖ್ಯೆ ಕಡಿಮೆಯಾಗಿದೆ. ನೂತನ ಸರಕಾರಿ ಸಭಾಭವನ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಕೋಚಿಂಗ್ ಸೆಂಟರ್‌ಗೆ ಅವಕಾಶ ಕಲ್ಪಿಸುವ ಮೂಲಕ ಮಹತ್ವದ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹೇಳಿದರು.
ಸರಕಾರಿ ನೌಕರರು ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವವರು. ಇದರ ನಡುವೆಯೂ ಇಂತಹ ಸುಂದರ ಸಭಾಭವನ ನಿರ್ಮಿಸಿರುವುದು ಶ್ಲಾಘನೀಯ. ಇದು ಕೌಶಲ್ಯ ವೃದ್ಧಿಸುವಂತಹ ಉತ್ತಮ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಕಾನೂನಿಗೆ ಎಲ್ಲರೂ ತಲೆಬಾಗಬೇಕು :
ಎಲ್ಲಾ ಕ್ಷೇತ್ರದಲ್ಲೂ ಮುಂದಿರುವ ದ.ಕ.ಜಿಲ್ಲೆ ಪ್ರಸ್ತುತ ದಿನಗಳಲ್ಲಿ ದಾರಿ ತಪ್ಪುತ್ತಿದೆ. ಖ್ಯಾತಿಗಿಂತ ಕುಖ್ಯಾತಿಯನ್ನೇ ಪಡೆಯುತ್ತಿದೆ. ಇದು ದೌರ್ಭಾಗ್ಯ.ಕಾನೂನಿನಡಿ ಎಲ್ಲರೂ ತಲೆಬಾಗಲೇ ಬೇಕು. ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು.
ಇಲ್ಲಿ ಶಿಕ್ಷಣ ಪಡೆದು ಬೇರೆ ಕಡೆ ಉದ್ಯೋಗವನ್ನು ಅರಸಿ ಹೋಗುವ ಮಂದಿ ನೀವು ಮಂಗಳೂರಿನವರೇ? ನಿಮ್ಮಲ್ಲಿ ಯಾಕೆ ಈ ರೀತಿಯ ಗಲಾಟೆಗಳು ಎಂಬ ಮುಜುಗರದ ಪ್ರಶ್ನೆಗಳನ್ನು ಎದುರಿಸಬೇಕಾದ ಸಂದರ್ಭಗಳು ಎದುರಾಗುತ್ತಿವೆ. ಇದು ಜಿಲ್ಲೆಗೆ ಭೂಷಣವಲ್ಲ ಎಂದರು
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಾರ್ಜ್ ಪಿಂಟೋ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ, ಎ.ಜೆ.ಆಸ್ಪತ್ರೆಯ ಆಡಳಿತ ನಿರ್ದೇಶಕ ಎ.ಜೆ.ಶೆಟ್ಟಿ, ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಯಕೀರ್ತಿ ಜೈನ್, ಪ್ರಮುಖರಾದ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್ ಸ್ವಾಗತಿಸಿದರು. ಕೃಷ್ಣ ಕುಮಾರ್ ವಂದಿಸಿದರು.
ಅಭಿನಂದನೆ : ಸಮ್ಮಾನ
ಇದೇ ಸಂದರ್ಭ ನೂತನ ಸಭಾಭವನ ನಿರ್ಮಾಣ ಕಾರ್ಯದಲ್ಲಿ ಆಹರ್ನಿಶಿ ದುಡಿದ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಜಾರ್ಜ್ ಪಿಂಟೋ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ನೂತನ ಸಭಾಭವನ ನಿರ್ಮಾಣದ ಗುತ್ತಿಗೆದಾರ ದೇವದಾಸ್ ಕೋಡಿಕಲ್ ಹಾಗೂ ಇಂಜಿನೀಯರ್ ಆಳ್ವ ಅವರನ್ನು ಸನ್ಮಾನಿಸಲಾಯಿತು.