ಬೆಂಗಳೂರು: ‘ಬೃಹತ್ ಬೆಂಗಳೂರು ಪಾಲಿಕೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಸರಕಾರದ ಜನಾದೇಶವಲ್ಲ,’ ಎಂದು ಹೇಳಿರುವ ಸಿದ್ಧರಾಮಯ್ಯ, ‘ಪಕ್ಷದ ಸೋಲಿಗೆ ಮುಖ್ಯಮಂತ್ರಿಯಾಗಿ ನಾನೇ ಹೊಣೆ ಹೋರುವೆ,’ ಎಂದು ಹೇಳಿದ್ದಾರೆ.
ಬೃಹತ್ ಚುನಾವಣಾ ಫಲಿತಾಂಶ ಹೊರ ಬಂದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ಆಡಳಿತದ ಚುಕ್ಕಾಣಿ ಹಿಡಿದು, ನಗರ ಅಭಿವೃದ್ಧಿಗೊಳಿಸುವಲ್ಲಿ ಬಿಜೆಪಿ ವಿಫಲವಾಗಿತ್ತು. ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದರು. ಜತಗೆ ಕಳೆದ ಎರಡು ವರ್ಷಗಳ ಕಾಂಗ್ರೆಸ್ ಸರಕಾರದ ಸಾಧನೆಗಳನ್ನೂ ಜನರಿಗೆ ತಲುಪಿಸಿದ್ದೆವು. ಆದರೂ. ಸರಳ ಬಹುಮತದ ನಿರೀಕ್ಷೆಯಲ್ಲಿದ್ದ ನಮ್ಮ ಭರವಸೆ ಹುಸಿಯಾಗಿದೆ. ಸೋಲಿಗೆ ಕಾರಣಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ, ಎಂದು ಹೇಳಿದರು.
‘ಕಳೆದ ಬಾರಿಗೆ ಹೋಲಿಸಿದಲ್ಲಿ, ಈ ಬಾರಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿದೆ. ಆದರೆ, ಸರಕಾರದ ಉತ್ತಮ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ,’ ಎಂದು ಹೇಳಿದರು.
‘ನಗರಾಡಳಿತ ಹಾಗೂ ಗ್ರಾಮ ಪಂಚಾಯತಿ ಚುನಾವಣಾ ಹೋರಾಟಕ್ಕೆ ವಿಷಯಗಳು ವಿಭಿನ್ನವಾಗಿರುತ್ತದೆ. ನಗರಾಭಿವೃದ್ಧಿಗೆ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸಾಕಷ್ಟು ಒತ್ತು ನೀಡಿತ್ತು. ಪ್ರಣಾಳಿಕೆಯಲ್ಲಿಯೂ ನಗರದ ಪ್ರಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಸಾಕಷ್ಟು ಅಂಶಗಳನ್ನು ಚರ್ಚಿಸಲಾಗಿತ್ತು. ಆದರೂ, ಜನಾದೇಶ ಕಾಂಗ್ರೆಸ್‌ಗೆ ಸಿಕ್ಕಿಲ್ಲ. ಆದರೆ, ಸರಕಾರ ಬೆಂಗಳೂರು ಅಭಿವೃದ್ಧಿಗಾಗಿ ತನ್ನ ಶ್ರಮವನ್ನು ಮುಂದುವರಿಸಲಿದೆ,’ ಎಂದು ಭರವಸೆ ನೀಡಿದರು.
ಬೆಂಗಳೂರಿಗೊಬ್ಬ ಸಚಿವ: ಬಿಬಿಎಂಪಿ ಚುನಾವಣೆ ಫಲಿತಾಂಶದ ನಂತರ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದು ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಕಾಂಗ್ರೆಸ್ ವಿರುದ್ಧವಾಗಿದ್ದರೂ ಬೆಂಗಳೂರು ಅಭಿವೃದ್ಧಿಗಾಗಿ ಕಾಂಗ್ರೆಸ್ಸಿಗರೊಬ್ಬರನ್ನು ಸಚಿರವನ್ನಾಗಿ ಮಾಡಲಾಗುವುದು, ಎಂದು ಹೇಳಿದರು.