ಶಿವಮೊಗ್ಗ: ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವುದಕ್ಕಾಗಿ ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠಕ್ಕೆ ₹ 62.81 ಲಕ್ಷ ದಂಡ ವಿಧಿಸಿ ಎಸಿಎಫ್ (ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ನ್ಯಾಯಾಲಯ ಆದೇಶಿಸಿದೆ.
‘ಮಠದ ಆಡಳಿತ ಮಂಡಳಿ ಹುಂಚ ಹೋಬಳಿ ಸರ್ವೇ ನಂಬರ್ 7ರಲ್ಲಿ ಒತ್ತುವರಿ ಮಾಡಿಕೊಂಡಿರುವ 19 ಎಕರೆ ಅರಣ್ಯ ಭೂಮಿಯನ್ನು 30 ದಿನಗಳ ಒಳಗೆ ತೆರವುಗೊಳಿಸಬೇಕು. ಹಲವು ವರ್ಷ ಒತ್ತುವರಿ ಮಾಡಿದ್ದರಿಂದ ಪರಿಸರದ ಮೇಲಾದ ಪರಿಣಾಮ ಲೆಕ್ಕಹಾಕಿ ವಿಧಿಸಿರುವ ದಂಡ ಪಾವತಿಸಬೇಕು. ಇಲ್ಲದಿದ್ದರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿರುವ ವೇದಪಾಠ ಶಾಲೆ, ಗುರುಕುಲಗಳು ಹಾಗೂ ನೀರಿನ ತೊಟ್ಟಿಗಳನ್ನು ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಎಸಿಎಫ್ ಆಲ್ವಿನ್ ಜುಲೈ 30ರಂದು ಹೊರಡಿಸಿದ ಆದೇಶದಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
1991–2002ರ ಅವಧಿಯಲ್ಲಿ ಒತ್ತುವರಿ ನಡೆದಿದ್ದು, ರಾಮಚಂದಪುರ ಗ್ರಾಮದ ಸರ್ವೇ ನಂಬರ್ 7ರಲ್ಲಿ 120 ಎಕರೆ ಹಾಗೂ ಸರ್ವೇ ನಂಬರ್ 56ರಲ್ಲಿ 100 ಎಕರೆ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿವೆ. ಈ ಪ್ರದೇಶದ 19 ಎಕರೆಯನ್ನು ಮಠ ಒತ್ತುವರಿ ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೇವರ ಕೃಪೆಗೆ ಪಾತ್ರರಾಗಿ: ಜೂನ್ 19, 2001ರಲ್ಲಿ ಒತ್ತುವರಿ ಪ್ರಕರಣ ಬೆಳಕಿಗೆ ಬಂದ ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಮಠದ ಆಡಳಿತ ವರ್ಗ, ‘ಸರ್ವೇ ನಂಬರ್ 7ರಲ್ಲಿರುವ ಎಲ್ಲ ಪ್ರದೇಶವನ್ನೂ ಮಠದ ಜಾನುವಾರುಗಳ ಮೇವಿಗೆ ಹಾಗೂ ಜನಪರ ಕಾರ್ಯಗಳಿಗೆ ಮೀಸಲಿಡಬೇಕು. ಆ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು’ ಎಂದು ಕಿವಿಮಾತು ಹೇಳಿತ್ತು.
ಮಠದ ಪತ್ರ ಹಾಗೂ ಒತ್ತುವರಿ ಪ್ರಮಾಣದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಹೆಚ್ಚುವರಿ ಪಿಸಿಸಿಎಫ್ ಅವರು ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶ ನೀಡಿದ್ದರು. ಸರ್ವೇ ಕಾರ್ಯ, ವಿಚಾರಣೆ ನಡೆಸಿದ ಅಧಿಕಾರಿಗಳು, ಮಠದಿಂದ 19 ಎಕರೆ ಒತ್ತುವರಿ ಆಗಿರುವುದನ್ನು ದೃಢಪಡಿಸಿದ್ದರು.
