ಬೆಂಗಳೂರು, ಆ.7- ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶ್ವವಿಖ್ಯಾತ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು.
ಮೈಸೂರಿನ ರಾಣಿ ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದರು.ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಅವರನ್ನು
ಮಂಗಳವಾದ್ಯ, ಅರಮನೆ ವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ತೆರೆದ ಜೀಪಿನಲ್ಲಿ ರಾಜಮರ್ಯಾದೆಯೊಂದಿಗೆ ಕರೆತಂದುದು ವಿಶೇಷವಾಗಿತ್ತು.ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಜಂಟಿಯಾಗಿ ಆಯೋಜಿಸಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಗುಲಾಬಿ ಹೂವಿನಿಂದ ತಯಾರಿಸಿರುವ ಬೆಂಗಳೂರಿನ ಅರಮನೆ ಮಾದರಿ ಎಲ್ಲರ ಮನಸೂರೆಗೊಳ್ಳುತ್ತಿದೆ.ಹಸಿರು ಗಿಡಗಳಲ್ಲಿ ಬಣ್ಣ ಬಣ್ಣದ ವಿಭಿನ್ನವಾದ ಹೂವುಗಳು ಸೂಜಿಗಲ್ಲಿನಂತೆ ಚಿಣ್ಣರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ಸೆಳೆಯುತ್ತಿವೆ. ಗಾಜಿನ ಮನೆಯ ಮುಂಭಾಗ ಎರಡೂ ಸಾಲುಗಳಲ್ಲಿ ಹಣ್ಣು-ತರಕಾರಿಗಳಿಂದ ಸಿದ್ಧಪಡಿಸಿದ ಉತ್ಪನ್ನಗಳು, ತಿಂಡಿ-ತಿನಿಸುಗಳು, ನೈಸರ್ಗಿಕ ಹಾಗೂ ಸಾವಯವ ಉತ್ಪನ್ನಗಳ ಮಳಿಗೆಗಳು, ತೋಟಗಾರಿಕೆ ಮಳಿಗೆಗಳಿಗೆ ಜನರು ಭೇಟಿ ನೀಡಿ ತಮಗಿಷ್ಟವಾದುದನ್ನು ಖರೀದಿಸಿದರು.ಗಾಜಿನ ಮನೆಯಲ್ಲಿ ಮೈಸೂರನ್ನು ಆಳಿದ ಐವರು ಒಡೆಯರ್‌ಗಳ ಪ್ರತಿಮೆಯನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. ಮಳಿಗೆಗಳ ಮುಂಭಾಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮರಳಿನ ಕಲಾಕೃತಿಯನ್ನು ನಿರ್ಮಿಸಲಾಗಿದೆ.ಬೋನ್ಸಾಯ್ ಪಾರ್ಕ್‌ನಲ್ಲಿ ದಪ್ಪ ಮೆಣಸಿನಕಾಯಿಯಿಂದ ಆನೆ ಆಕೃತಿಯನ್ನು ನಿರ್ಮಾಣ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ನಗರದ ಜನರಂತೂ ಪ್ರಾರಂಭದ ದಿನವೇ ಮುಗಿಬಿದ್ದು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.