ಕರ್ನಾಟಕ

ಲೋಕಾಯುಕ್ತ ಹಗರಣದಲ್ಲಿ ಬಂಧಿತ ಅಶ್ವಿನ್‌ರಾವ್ ಒಂಬತ್ತು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ

Pinterest LinkedIn Tumblr

ashwin11

ಬೆಂಗಳೂರು, ಜು.28: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ಎರಬಾಟಿ ಅವರನ್ನು ಒಟ್ಟು ಒಂಬತ್ತು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ಯಿಂದ ನಿನ್ನೆ ಬಂಧಿತರಾದ ಅಶ್ವಿನ್ ಎರಬಾಟಿ ಅವರನ್ನು ಇಂದು ಮಧ್ಯಾಹ್ನ 2.05ಕ್ಕೆ ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಶೇಷ ತನಿಖಾ ದಳದ ಅಧಿಕಾರಿಗಳು ಅಶ್ವಿನ್ ಅವರ ಮನೆಗೆ ಭೇಟಿ ನೀಡಿದ್ದ ಕ್ಷಣದಿಂದ ಪ್ರತಿಯೊಂದು ಬೆಳವಣಿಗೆಗಳನ್ನು ವಿವರವಾಗಿ ತಿಳಿದುಕೊಂಡ ಲೋಕಾಯುಕ್ತ ನ್ಯಾಯಮೂರ್ತಿಗಳು ನಂತರ ಸರ್ಕಾರಿ ವಿಶೇಷ ಅಭಿಯೋಜಕರು ಮತ್ತು ಪ್ರತಿವಾದಿ ವಕೀಲರ ವಾದ ಆಲಿಸಿದ ನಂತರ ನಾಳೆಯಿಂದ 9 ದಿನಗಳವರೆಗೆ ಅಶ್ವಿನ್ ಎರಬಾಟಿ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ನ್ಯಾಯಾಧೀಶರ ಪ್ರಶ್ನೆಗಳಿಗೆ ಉತ್ತರಿಸಿದ ಅಶ್ವಿನ್ ಎರಬಾಟಿ ನಿನ್ನೆ ಬೆಳಗ್ಗೆ 8.30ಕ್ಕೆ ಹೈದರಾಬಾದ್‌ನ ರೈನ್‌ಬೋ ಅಪಾರ್ಟ್‌ಮೆಂಟ್ ಸಿ ಬ್ಲಾಕ್‌ನಲ್ಲಿರುವ ನಮ್ಮ ಮನೆಗೆ ಬಾಲರಾಜ್ ನೇತೃತ್ವದ ತನಿಖಾಧಿಕಾರಿಗಳು ಆಗಮಿಸಿದ್ದು, ನೋಟಿಸ್ ನೀಡಿದ ನಂತರ ಮಧ್ಯಾಹ್ನ 1.30ರ ಸುಮಾರಿಗೆ ನನ್ನನ್ನು ವಶಕ್ಕೆ ತೆಗದುಕೊಂಡರು. ಆನಂತರ ಹೈದರಾಬಾದ್‌ನಲ್ಲಿ ಊಟ ಮಾಡಿಸಿ ಬೆಂಗಳೂರಿಗೆ ರಾತ್ರಿ ಕರೆತಂದರು. 11 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ವೈದ್ಯಕೀಯ ತಪಾಸಣೆ ಮಾಡಿಸಿದರು ಎಂಬ ವಿವರಗಳನ್ನು ನೀಡಿದರು.

ಕಾಲಕಾಲಕ್ಕೆ ಊಟ, ತಿಂಡಿ ಕೊಡಿಸಲಾಗಿದೆ. ತಮ್ಮೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಲಾಗಿದೆ ಎಂದು ಅಶ್ವಿನ್ ವಿವರಣೆ ನೀಡಿದರು. ಆನಂತರ ಅಶ್ವಿನ್ ಎರಬಾಟಿ ಪರ ವಕೀಲರು ವಾದ ಮಂಡಿಸಿ ಬೆಳಗ್ಗೆ 10.30ಕ್ಕೆ ಚನ್ನಬಸಪ್ಪ ಎಂಬುವರು ನೀಡಿರುವ ದೂರು ಆಧರಿಸಿ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಅದಕ್ಕೂ ಎರಡೂವರೆ ಗಂಟೆ ಮೊದಲು ಹೈದರಾಬಾದ್‌ಗೆ ಎಸ್‌ಐಟಿ ಅಧಿಕಾರಿಗಳು ತೆರಳಿ 8.30ಕ್ಕೆ ಅಶ್ವಿನ್‌ರಾವ್ ಮನೆಗೆ ಭೇಟಿ ನೀಡಿದರು.

ಹೀಗಾಗಿ ಇದು ಪೂರ್ವನಿಯೋಜಿತ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ವಶದಲ್ಲಿದ್ದಾರೆ. ಅಶ್ವಿನ್‌ರಾವ್ ಕೂಡ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಅಗತ್ಯವಿಲ್ಲ. ತಾವು ಸಲ್ಲಿಸಿರುವ ಜಾಮೀನು ಅರ್ಜಿ ಪರಿಗಣಿಸಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ವಿಶೇಷ ಅಭಿಯೋಜಕ ಜನಾರ್ಧನ್ ಅವರು, ಆರೋಪಿಗಳು ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹಿಂದೆ ದಾಖಲಾಗಿರುವ ಎಫ್‌ಐಆರ್‌ಗಿಂತಲೂ ಮೊದಲೇ ಇನ್ನೊಂದು ಎಫ್‌ಐಆರ್ ದಾಖಲಾಗಿತ್ತು. ಅದನ್ನು ಆಧರಿಸಿ ಪೊಲೀಸರು ಹೈದರಾಬಾದ್‌ಗೆ ತೆರಳಿದ್ದರು ಎಂದು ಸಮರ್ಥಿಸಿಕೊಂಡರು. ಆರೋಪಿಗಳು ಬೇರೆ ಬೇರೆ ಸಿಮ್ ಮೊಬೈಲ್ ಬಳಸಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಪ್ರಯತ್ನ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಯಾರ್ಯಾಸರು ಭಾಗಿಯಾಗಿದ್ದಾರೆ. ಎಷ್ಟೆಲ್ಲಾ ಆರೋಪಗಳು ನಡೆದಿವೆ ಎಂಬ ವಿಚಾರಣೆ ಅಗತ್ಯವಿರುವುದರಿಂದ ಪೊಲೀಸ್ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ಎಷ್ಟು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕೆಂದು ನ್ಯಾಯಾಧೀಶರು ಕೇಳಿದಾಗ ತನಿಖಾಧಿಕಾರಿ ಎಸಿಪಿ ಲಾಬೂರಾಮ್ 14 ದಿನಗಳ ಕಾಲಾವಕಾಶ ಕೇಳಿದರು.

ಸರ್ಕಾರಿ ಪರ ವಕೀಲರು 10 ದಿನಗಳವರೆಗಾದರೂ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ವಿ.ಜಿ.ಬೋಪಯ್ಯ ಅವರು ನಾಳೆಯಿಂದ 9 ದಿನಗಳವರೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಆರೋಪಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ನೀಡಿ, ವೈದ್ಯಕೀಯ ತಪಾಸಣೆ ನಡೆಸುವಂತೆ ನ್ಯಾಯಾಧೀಶರು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದರು.

Write A Comment