ಕರ್ನಾಟಕ

ಮತ್ತೆ ಮೂವರು ರೈತರ ಆತ್ಮಹತ್ಯೆ

Pinterest LinkedIn Tumblr

raitaಎಚ್‌ಡಿ ಕೋಟೆ/ತುಮಕೂರು, ಜು.22- ಬೆಳೆನಷ್ಟ ಹಾಗೂ ಸಾಲದ ಬಾಧೆ ತಾಳಲಾರದೆ ರಾಜ್ಯದಲ್ಲಿ ಮೂವರು ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆಯ ಮಾದಾ ಪುರ ಗ್ರಾಮದಲ್ಲಿ ನಟೇಶ್‌ಮೂರ್ತಿ  (30) ಎಂಬುವರು ನೇಣು ಹಾಕಿಕೊಂಡಿದ್ದಾರೆ. ಈತನು ತನ್ನ ಮೂರು ಎಕರೆ ಜಮೀನಿನಲ್ಲಿ ಹತ್ತಿ, ಮುಸುಕಿನ ಜೋಳ ಬೆಳೆದಿದ್ದ ಒಟ್ಟು ನಾಲ್ಕು ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ಪಡೆದಿದ್ದ.

ಬ್ಯಾಂಕ್‌ನಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗಿದ್ದು, ಸಾಲ ಹೇಗೆ ತಿರಿಸಬೇಕೆಂದು ತಿಳಿಯದೆ ಮನನೊಂದು ತನ್ನ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಎಚ್‌ಡಿಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇಲ್ಲಿಯವರೆಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 6 ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ರೈತರ ಈ ಸರಣಿ ಆತ್ಮಹತ್ಯೆಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ತೀವ್ರ ಆತಂಕವನ್ನುಂಟುಮಾಡಿದೆ.

ತುಮಕೂರು: ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ರೈತನೋರ್ವ ಬೆಳಗ್ಗೆ ಅನುಮಾನಾಸ್ಪದವಾಗಿ ಶವವಾಗಿರುವ ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಅಮರಾಪುರದ ನಿವಾಸಿ ಯೋಗಾನಂದಮೂರ್ತಿ (34) ಸಾವನ್ನಪ್ಪಿರುವ ರೈತ. ಈತ ತನ್ನ  5 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ವಿವಿಧ ಬ್ಯಾಂಕ್‌ನಿಂದ ಹಾಗೂ ಕೈಸಾಲವಾಗಿ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಒತ್ತಡದಿಂದ ಮನನೊಂದಿದ್ದ ಈತ ಸಂಬಂಧಿಕರ ಬಳಿ ಹಣ ಕೇಳಿದ್ದನು ಎಂದು ಹೇಳಲಾಗುತ್ತಿದೆ. ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಯೋಗಾನಂದಮೂರ್ತಿ ಅನುಮಾನಾಸ್ಪದವಾಗಿ ಬೆಳಗ್ಗೆ ಮೃತಪಟ್ಟಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಸ್ಥಳಕ್ಕಾಗಮಿಸಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹುಬ್ಬಳ್ಳಿ: ಸಾಲದ ಬಾಧೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ರಾಮಪ್ಪ ಕಡಪಟ್ಟ (66) ಎಂಬುವವನೇ ಮೃತಪಟ್ಟ ರೈತನಾಗಿದ್ದು, ಈತನು ತನ್ನ 4 ಎಕರೆ ಜಮೀನಿನಲ್ಲಿ ಸೋಯಾಬಿನ್, ಶೇಂಗಾ ಬೆಳೆ ಬೆಳೆದಿದ್ದ. ಈ ಸಂಬಂಧ ಬ್ಯಾಂಕ್‌ನಿಂದ ಎರಡು ಲಕ್ಷ ರೂ. ಸಾಲ ಮಾಡಿದ್ದ. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ನಷ್ಟವಾಗಿದ್ದರಿಂದ ಮನನೊಂದು ವಿಷ ಸೇವಿಸಿದ್ದಾನೆ.  ಅಸ್ವಸ್ಥಗೊಂಡಿದ್ದ ಈತನನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ.  ಕುಂದಗೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Write A Comment