ಬೆಂಗಳೂರು, ಜು.17: ಮೋರಿಯೊಳಗೆ ನುಸುಳಿ ಆಭರಣ ಅಂಗಡಿ ಕನ್ನ ಕೊರೆಯುತ್ತಿದ್ದ ಮೂವರನ್ನು ಜೆಪಿ ನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಕಬೀರ್, ಹುಸೇನ್ ಮತ್ತು ಮೊಹಮ್ಮದ್ ಕನ್ನ ಕೊರೆಯುವಾಗ ಪೊಲೀಸರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಕಳ್ಳರು.
ಕನಕಪುರ ರಸ್ತೆಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್ ಅಂಗಡಿ ಬಳಿ 100 ಮೀಟರ್ ದೂರ ಮೋರಿಯೊಳಗೆ ನುಸುಳಿಕೊಂಡು ಹೋಗಿ ಅಂಗಡಿಗೆ ಕನ್ನ ಕೊರೆಯಲು ಆರಂಭಿಸಿದ್ದಾರೆ. ಪಕ್ಕದ ಬೀದಿಯಲ್ಲಿ ಸಾವಾಗಿದ್ದು, ಭಜನೆ ನಡೆಯುತ್ತಿದ್ದರಿಂದ ಅಲ್ಲಿಗೆ ಬಂದಿದ್ದ ಕೆಲವರು ಸಿಗರೇಟ್ ಸೇದಲೆಂದು ಹೊರಗೆ ಬಂದಿದ್ದು, ಅಂಗಡಿ ಸಮೀಪ ತೆರಳಿದ್ದಾರೆ.
ಆಗ ಮೋರಿಯೊಳಗಿನಿಂದ ಕಲ್ಲು ಕುಟ್ಟುವಂತ ಶಬ್ದ ಕೇಳಿಸಿದ್ದು ಗಮನಿಸಿದಾಗ ಮೊಬೈಲ್ ಟಾರ್ಚ್ನ ಬೆಳಕು ಕಂಡಿದೆ. ಕೂಡಲೇ ಅವರುಗಳು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಗಸ್ತು ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ಸಿಬ್ಬಂದಿಯೊಂದಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಚರಂಡಿಯ ಕಲ್ಲು ತೆಗೆದು ಕಳ್ಳರು ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಮೋರಿಯನ್ನು ಮುಚ್ಚಿದ್ದಾರೆ. ಆನಂತರ ಕನ್ನ ಕೊರೆಯುತ್ತಿದ್ದ ಸ್ಥಳದಲ್ಲೇ ಚರಂಡಿ ಮೇಲಿನ ಕಲ್ಲು ತೆಗೆದು ಒಬ್ಬನನ್ನು ಹೊರಕ್ಕೆ ಎಳೆದುಕೊಂಡು ಗಲಾಟೆ ಮಾಡದಂತೆ ಎಚ್ಚರಿಸಿ ಒಬ್ಬೊಬ್ಬರನ್ನಾಗಿ ನಾಲ್ವರನ್ನೂ ಮೇಲಕ್ಕೆತ್ತಿದ್ದಾರೆ.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ. ಆರೋಪಿಗಳು ಮೋರಿಯೊಳಗೆ ನುಸುಳುವುದಕ್ಕೂ ಮೊದಲೇ ಮೈಗೆ ಯಾವುದೇ ಕೊಳೆ ಅಂಟಿಕೊಳ್ಳಬಾರದೆಂದು ಸೀಮೆಎಣ್ಣೆ ಹಚ್ಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗುವುದಕ್ಕೂ ಮುನ್ನ ಆರೋಪಿಗಳು ಸ್ಥಳವನ್ನು ಪರಿಶೀಲಿಸಿ ಸಂಚು ರೂಪಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜೆಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

