ಕರ್ನಾಟಕ

ಲೋಕಾಯುಕ್ತ ದಲ್ಲಿ ಅವ್ಯವಹಾರಕ್ಕೆ ಭಾಸ್ಕರ್‌ರಾವ್ ಸಾಥ್ : ಸಂತೋಷ್ ಹೆಗಡೆ

Pinterest LinkedIn Tumblr

Santosh-Hegde-Protest-in-ba ಬೆಂಗಳೂರು, ಜು.15- ಲೋಕಾ ಕಳಂಕ ಪ್ರಕರಣಕ್ಕೆ ಸ್ವತಃ ಲೋಕಾಯುಕ್ತರೇ ಹೊಣೆ. ಇಂತಹ ಭ್ರಷ್ಟ ವ್ಯಕ್ತಿಯ ರಕ್ಷಣೆಗೆ ಸರ್ಕಾರ ನಿಂತಿರುವುದು ವಿಪರ್ಯಾಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕಿಡಿಕಾರಿದ್ದಾರೆ. ಲೋಕಾಯುಕ್ತ ಭಾಸ್ಕರ್‌ರಾವ್ ರಾಜೀನಾಮೆಗೆ ಒತ್ತಾಯಿಸಿ ಭೂ ಕಬಳಿಕೆ

ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದಲ್ಲಿ ಸ್ವತಃ ಭಾಸ್ಕರ್‌ರಾವ್ ಅವರೇ ಪಾಲ್ಗೊಂಡಿದ್ದಾರೆ. ಇದಕ್ಕೆ ಅವರು ತಮ್ಮ ಪುತ್ರನನ್ನು ರಕ್ಷಿಸಲು ಮುಂದಾಗಿರುವುದೇ ಸಾಕ್ಷಿ ಎಂದರು. ಕೆಲವು ದಿನಗಳ ಹಿಂದೆ ಎಸ್.ಆರ್.ಹಿರೇಮಠ್ ಅವರು ಭಾಸ್ಕರ್‌ರಾವ್ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರ ಪುತ್ರ ನಡೆಸುತ್ತಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದಾಗ ಪರಿಶೀಲಿಸಿ ಬುದ್ಧಿ ಹೇಳುತ್ತೇನೆ ಎಂದಿದ್ದ ಇದೇ ಲೋಕಾಯುಕ್ತರು ಇದೀಗ ನನ್ನ ಮಗ ಸಾಚಾ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಲೋಕಾಯುಕ್ತ ಸಂಸ್ಥೆಯಲ್ಲಿ ಕಳಂಕ ಎದುರಾದಾಗ ತನ್ನ ಅಧೀನ ಅಧಿಕಾರಿಗಳಿಂದ ತನಿಖೆ ನಡೆಸಬಹುದೇ ಹೊರತು ವಿಶೇಷ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಪತ್ರ ಬರೆಯಲು ಲೋಕಾಯುಕ್ತರಿಗೆ ಕಾನೂನಿನಲ್ಲಿ ಯಾವುದೇ  ಅವಕಾಶ ಇಲ್ಲ ಎನ್ನುವುದನ್ನು ಹೆಗಡೆ ಸ್ಪಷ್ಟಪಡಿಸಿದರು.

ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಆರೋಪ ಕೇಳಿಬಂದಾಗ ಅಂತಹ ಪ್ರಕರಣವನ್ನು ವಿಶೇಷ ತನಿಖೆಗೊಳಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಾಧ್ಯವೇ ಇಲ್ಲ ಎನ್ನುವುದನ್ನು ಹೆಗಡೆ ವಿವರಿಸಿದರು. ಈ ಹಿಂದೆ ಇಬ್ಬರು ರಾಜಕಾರಣಿಗಳ ಭ್ರಷ್ಟಾಚಾರ ಬಯಲು ಮಾಡಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಸದ್ಯದ ಸರ್ಕಾರದಲ್ಲೂ ಕೆಲವು ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರ ರಕ್ಷಣೆ ಉದ್ದೇಶದಿಂದಲೇ ಸರ್ಕಾರ ಭಾಸ್ಕರ್‌ರಾವ್ ರಕ್ಷಣೆಗೆ ಮುಂದಾಗಿದೆ ಎಂದು ಅವರು ಆರೋಪಿಸಿದರು. ಭಾಸ್ಕರ್‌ರಾವ್ ಅವರು ಲೋಕ ಕಳಂಕದ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದ ಕೂಡಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಅಗತ್ಯವೇನಿತ್ತು ಎಂದು ಹೆಗಡೆ ಪ್ರಶ್ನಿಸಿದ್ದಾರೆ. ಒಟ್ಟಾರೆ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವುದೇ ಆಡಳಿತ ವರ್ಗದವರ ದುರುದ್ದೇಶವಾಗಿದೆ.

ಹೀಗಾಗಿ ಎಸ್‌ಐಟಿ ತನಿಖೆಯಿಂದ ಯಾವುದೇ ಲಾಭವಿಲ್ಲ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಭಾಸ್ಕರ್‌ರಾವ್ ಅವರು ರಾಜೀನಾಮೆ ನೀಡಬೇಕು ಎಂದು ಸಂತೋಷ್ ಹೆಗಡೆ ಒತ್ತಾಯಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಎ.ಟಿ.ರಾಮಸ್ವಾಮಿ, ಮಾಜಿ ಸ್ಪೀಕರ್ ಕೃಷ್ಣ, ಬಿ.ಟಿ.ಲಲಿತಾ ನಾಯಕ್, ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಲೋಕಾಯುಕ್ತ ಭಾಸ್ಕರ್‌ರಾವ್ ವಿರುದ್ಧ ಧಿಕ್ಕಾರ ಕೂಗಿದರು.  ಮೌರ್ಯ ವೃತ್ತದಿಂದ ಆರಂಭವಾದ ಮೆರವಣಿಗೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಡಿಸಿಪಿ ಸಂದೀಪ್‌ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Write A Comment