ಕರ್ನಾಟಕ

ಇತ್ತೀಚೆಗೆ ಬಿಡುಗಡೆಗೊಂಡಿದ್ದ ರೌಡಿ ಹತ್ತಿ ಮಂಜನನ್ನು ನಡುರಸ್ತೆಯಲ್ಲೇ ಕೊಚ್ಚಿ ಹಾಕಿದ ದುಷ್ಕರ್ಮಿಗಳು

Pinterest LinkedIn Tumblr

manjaa

ತುಮಕೂರು, ಜೂ.16: ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಇತ್ತಿಚೆಗಷ್ಟೆ ಬಿಡುಗಡೆಗೊಂಡಿದ್ದ ರೌಡಿ ಮಂಜು ಅಲಿಯಾಸ್ ಹತ್ತಿ ಮಂಜನನ್ನು ಗುಂಪೊಂದು ರಾತ್ರಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ.

ರೈಲ್ವೆ ನಿಲ್ದಾಣ ಸಮೀಪದ ಶಾಂತಿನಗರ ನಿವಾಸಿಯಾದ ರೌಡಿ ಮಂಜು (36) ರಾತ್ರಿ ಸ್ನೇಹಿತರ ಜತೆ ವೀರಭದ್ರ ವೈನ್‌ಸ್ಟೋರ್‌ನಲ್ಲಿ ಮದ್ಯಪಾನ ಮಾಡಿ ಹೊರಗೆ ಬಂದಿದ್ದು, ಸ್ನೇಹಿತರು ಅವರ ಪಾಡಿಗೆ ತಮ್ಮ ಮನೆ ಕಡೆ ತೆರಳಿದ್ದಾರೆ. ಇತ್ತ ಮಂಜು ಒಂಟಿಯಾಗಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮತ್ತೆ ನಾಲ್ವರು ಸ್ನೇಹಿತರು ಎದುರಿಗೆ ಸಿಕ್ಕಿದ್ದಾರೆ. ಅವರೊಡನೆ ಮಾತನಾಡುತ್ತ ತೆರಳುತ್ತಿದ್ದಾಗ ಏಕಾಏಕಿ ಹೆಲ್ಮೆಟ್ ಧರಿಸಿದ್ದ ಐದು ಮಂದಿಯ ಗುಂಪೊಂದು ಈತನ ಮೇಲೆ ದಾಳಿಗೆ ಮುಂದಾಗುತ್ತಿದ್ದಂತೆ ಜತೆಯಲ್ಲಿದ್ದ ಸ್ನೇಹಿತರು ಗಾಬರಿಯಾಗಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಗುಂಪು ಮಂಜು ಮೇಲೆ ಮನಬಂದಂತೆ ಮಚ್ಚು-ಲಾಂಗ್‌ಗಳಿಂದ ತಲೆ ಹಾಗೂ ದೇಹದ ಭಾಗಕ್ಕೆ ಹಲ್ಲೆ ನಡೆಸಿದೆ. ಹಲ್ಲೆ ರಭಸಕ್ಕೆ ಮಂಜು ತಲೆಯ ಹಿಂಭಾಗ ಎರಡು ಹೋಳಾಗಿದ್ದು, ಮಚ್ಚು ಡೊಂಕಾಗಿದೆ. ಮಂಜು ಹಲ್ಲೆಯಿಂದ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಂಡ ಈ ಗುಂಪು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಪರಾರಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್, ಡಿವೈಎಸ್‌ಪಿ ಚಿದಾನಂದಸ್ವಾಮಿ, ವೃತ್ತ ನಿರೀಕ್ಷಕ ಬಾಳೇಗೌಡ, ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.

ರೌಡಿ ಮಂಜು ವಿರುದ್ಧ ವಿವಿಧ ಠಾಣೆಗಳಲ್ಲಿ ನಾಲ್ಕು ಕೊಲೆ ಪ್ರಕರಣ, ದರೋಡೆ, ಕಳ್ಳತನ, ದೊಂಬಿ, ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಈತ ನಾಲ್ಕೈದು ತಿಂಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದನು. ಈತ ವಾಸಿಸುತ್ತಿದ್ದ ಸಮೀಪದಲ್ಲಿಯೇ ಹತ್ತಿ ಎಂಬ ಏರಿಯಾ ಇದ್ದು, ಈತ ಅಲ್ಲಿ ಹತ್ತಿ ಮಂಜ ಎಂದೇ ಹೆಸರಾಗಿದ್ದನು. ಈ ಏರಿಯಾದಲ್ಲಿ ಪುಡಿರೌಡಿಗಳ ಗುಂಪೇ ಇದೆ ಎನ್ನಲಾಗಿದೆ.

ರೈಲು ಬರುವ ವೇಳೆಯೇ ಸ್ಕೆಚ್: ರಾತ್ರಿ 9.30 ರಿಂದ 10 ಗಂಟೆ ವೇಳೆಗೆ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲೊಂದು ಸಂಚರಿಸಲಿದ್ದು, ಈ ಅವಧಿಯನ್ನೇ ಈತನ ಹತ್ಯೆಗೆ ಟೈಂ ಫಿಕ್ಸ್ ಮಾಡಿಕೊಂಡಿದ್ದ ಈ ಗುಂಪು ಅದರಂತೆ ರಾತ್ರಿ ರೈಲು ಬರುತ್ತಿದ್ದಂತೆಯೇ ಈತನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದೆ.

ಹತ್ಯೆ ಆರೋಪಿಗಳ ಸುಳಿವು: ಈ ಬಗ್ಗೆ ಈ ಸಂಜೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ರೌಡಿ ಮಂಜು ಹತ್ಯೆ ಮಾಡಿದ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣ ಎನ್‌ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ಪಡೆ ರಚಿಸಲಾಗಿದೆ ಎಂದರು.

ವಿಶೇಷ ಪಡೆಯಲ್ಲಿ ತಿಲಕ್‌ಪಾರ್ಕ್ ವೃತ್ತ ನಿರೀಕ್ಷಕ ಬಾಳೇಗೌಡ, ಕ್ಯಾತಸಂದ್ರ ವೃತ್ತ ನಿರೀಕ್ಷಕ ರವಿಕುಮಾರ್, ತಿಲಕ್‌ಪಾರ್ಕ್ ಸಬ್‌ಇನ್ಸ್‌ಪೆಕ್ಟರ್ ರಾಧಾಕೃಷ್ಣ ಮತ್ತು ಸಿಬ್ಬಂದಿ ಇದ್ದಾರೆ. ಈ ತಂಡ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದೆ. ರೌಡಿ ಮಂಜು ವಿರುದ್ಧ ತಿಲಕ್‌ಪಾರ್ಕ್, ಎನ್‌ಇಪಿಎಸ್, ತುಮಕೂರು ಗ್ರಾಮಾಂತರ, ತುಮಕೂರು ನಗರ ಸೇರಿದಂತೆ ಏಳಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲಿದ್ದವು ಎಂದು ಅವರು ವಿವರಿಸಿದರು.

Write A Comment