ಕರಾವಳಿ

ಮಂಗಳೂರು ಪಣಂಬೂರು ಕಬ್ಬಿಣ ಕಂಪನಿಗೆ ಅದಿರು ನೀಡಿ : ಸಿಎಂಗೆ ಆಸ್ಕರ್ ಮನವಿ

Pinterest LinkedIn Tumblr

cm-oscar

ಬೆಂಗಳೂರು,ಜೂ.16: ಮಂಗಳೂರು ಬಳಿ ಇರುವ ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆಗೆ ಅದಿರು ಹಂಚಿಕೆ ಮಾಡುವಂತೆ ಎಐಸಿಸಿ ಮುಖಂಡ ಆಸ್ಕರ್ ಫರ್ನಾಂಡಿಸ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾಗಾಂಧಿಯವರ ಕಾಲದಲ್ಲಿ ಈ ಕಾರ್ಖಾನೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿತ್ತು. ಛತ್ತೀಸ್‌ಘಡದಿಂದ ಈ ಕಾರ್ಖಾನೆಗೆ ಈವರೆಗೂ ಅದಿರು ತರಲಾಗುತ್ತಿತ್ತು. ಕಳೆದ 15 ವರ್ಷಗಳಿಂದ ಕಾರ್ಖಾನೆ ನಷ್ಟದಲ್ಲಿದೆ. ಬಳ್ಳಾರಿಯ ರಮಣದುರ್ಗದ ಗಣಿಪ್ರದೇಶವನ್ನು ಕಾರ್ಖಾನೆಗೆ ಹಂಚಿಕೆ ಮಾಡಿದರೆ ಆರ್ಥಿಕವಾಗಿ ಉಂಟಾಗುವ ನಷ್ಟವನ್ನು ತಡೆಯಬಹುದು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.

ಎಂಆರ್‌ಡಿ ತಿದ್ದುಪಡಿಯ ಕಾಯ್ದೆ ಪ್ರಕಾರ ಖಾಸಗಿ ಸಂಸ್ಥೆಗಳಿಗೆ ಅದಿರು ಹಂಚಿಕೆ ಮಾಡಲು ಅವಕಾಶವಿದೆ. ಆದರೆ ಅನಾವಶ್ಯಕವಾಗಿ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ತಿರುಚಿ ಅದಿರು ಹಂಚಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ಗಣಿ ಪ್ರದೇಶ ಹಂಚಿಕೆ ಮಾಡಲು ಅವಕಾಶಗಳಿರುವಾಗ ಅವಕಾಶವಿಲ್ಲವೆಂದು ಹೇಳುವುದು ಅವೈಜ್ಞಾನಿಕ. ಕೂಡಲೇ ಕುದುರೆಮುಖ ಕಾರ್ಖಾನೆಗೆ ಅದಿರು ಹಂಚಿಕೆ ಮಾಡಬೇಕು ಎಂದು ಫರ್ನಾಂಡೀಸ್ ನೇತೃತ್ವದ ನಿಯೋಗ ಒತ್ತಾಯಿಸಿದೆ.

ಕಾರ್ಖಾನೆಯಲ್ಲಿ 1800 ಕಾರ್ಮಿಕರಿದ್ದು, ಅದಿರು ಹಂಚಿಕೆಯಿಲ್ಲದೆ ಕಾರ್ಖಾನೆ ನಷ್ಟದಲ್ಲಿ ಸಾಗುತ್ತಿದ್ದು, ಕೆಲಸವಿಲ್ಲದೆ ಕಾರ್ಮಿಕರು ಬೀದಿಗೆಬೀಳುವಂತಾಗಿದೆ. ಕೂಡಲೇ ಅದಿರು ಸರಬರಾಜು ಮಾಡಲು ಮನವಿ ಮಾಡಿದ್ದಾರೆ. ಈ ಮೊದಲು ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಹಂಚಿಕೆ ಮಾಡಲಾಗಿದ್ದು, ಅಕ್ರಮ ಗಣಿಗಾರಿಕೆಯ ಕುರಿತು ಕೆಲವು ಪ್ರಭಾವಿ ವ್ಯಕ್ತಿಗಳ ಮೇಲೆ ತನಿಖೆ ಶುರುವಾಗಿದ್ದರಿಂದ ಕೆಲವು ಗಣಿ ಕಂಪನಿಗಳು ಮತ್ತು ಅದಿರು ಹಂಚಿಕೆ ರದ್ದುಗೊಳಿಸಲಾಗಿತ್ತು.

ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳು ಒಂದೊಂದೆ ಇತ್ಯರ್ಥವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕಂಪನಿಗಳಿಗೆ ಅದಿರು ಹಂಚಿಕೆಗೆ ಆಕ್ಷೇಪವಿಲ್ಲವೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ ಕೂಡಲೇ ಕಾರ್ಖಾನೆಗಳಿಗೆ ಅದಿರು ಸರಬರಾಜು ಮಾಡಬೇಕಾಗಿ ಮನವಿ ಮಾಡಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯನವರು ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಫರ್ನಾಂಡೀಸ್ ತಿಳಿಸಿದರು. ಈ ಸಂದರ್ಭದಲ್ಲಿ ಕ್ರೀಡಾಸಚಿವ ಅಭಯಚಂದ್ರ ಜೈನ್, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಶಾಸಕ ಐವಾನ್ ಡಿಸೋಜ ಮತ್ತು ಆಡಳಿತ ಮಂಡಳಿ ಮುಖ್ಯಸ್ಥರು, ಕಾರ್ಮಿಕ ಸಂಘಟನೆಯ ನಾಯಕರು ಮತ್ತಿತರರು ಇದ್ದರು.

Write A Comment