ಕರ್ನಾಟಕ

ಯೂರೋಪ್ ಮತ್ತು ಅಮೆರಿಕದಲ್ಲಿ ಸಿದ್ದು “ಜಿಮ್ ರೋಡ್ ಶೋ”..!: ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ

Pinterest LinkedIn Tumblr

siddaramaiah

ಬೆಂಗಳೂರು: ಮುಂಬರುವ ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇನ್ನು ಹೂಡಿಕೆದಾರರ ಸಮಾವೇಶದ ನೇತೃತ್ವ ವಹಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ ಅಂತಿಮ ವಾರದಲ್ಲಿ ಆಯೋಜನೆಗೊಂಡಿರುವ ಸಮಾವೇಶವನ್ನು ಯಶಸ್ಸುಗೊಳಿಸಲು ಸ್ವತಃ ತಮ್ಮ ಮುಂದಾಳತ್ವದಲ್ಲಿ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಜಿಮ್ ಸಭೆಗಳನ್ನು ನಡೆಸಲಿದ್ದಾರೆ. ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಹರಿಸುವ ನಿಟ್ಟಿನಲ್ಲಿ ಹೂಡಿಕೆದಾರರ ಸೆಳೆಯಲು ಸಿದ್ದರಾಮಯ್ಯ ಅವರು ಈ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳ ಮೂಲಗಳು ತಿಳಿಸಿರುವಂತೆ ಸಿದ್ದರಾಮಯ್ಯ ಅವರ ರೋಡ್ ಶೋಗೆ ಸಂಬಂಧಿಸಿದ ಯೋಜನೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಲಂಡನ್, ಪ್ಯಾರಿಸ್ ಮತ್ತು ಯೂರೋಪ್ ಕೆಲ ಪ್ರಮುಖ ನಗರಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ರೋಡ್ ಶೋ ಆಯೋಜಿಸಲಾಗಿದೆ. ಇದಲ್ಲದೆ ಅಮೆರಿಕದ ಪ್ರಮುಖ ನಗರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೂಡಿಕೆದಾರರೊಂದಿಗೆ ಸಭೆಗಳನ್ನು ಆಯೋಜಿಸಲಾಗಿದೆ. ಇದಾದ ಬಳಿಕ ಜಪಾನ್ ಗೆ ತೆರಳಿರುವ ಸಿದ್ದರಾಮಯ್ಯ ಮತ್ತು ತಂಡ ಅಲ್ಲಿಯೂ ಹೂಡಿಕೆದಾರರೊಂದಿಗೆ ಸಭೆ ನಡೆಸಿ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲಿದ್ದಾರೆ.

ಇದೇ ಜಾತಿಕ ಹೂಡಿಕೆದಾರರ ಸಮಾವೇಶದ ಹಿನ್ನಲೆಯಲ್ಲಿ ಈ ಹಿಂದೆ ಆಯೋಜನೆಗೊಂಡಿದ್ದ ಜರ್ಮನಿ ಪ್ರವಾಸ ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರನ್ನು ಹೊರತು ಪಡಿಸಿ ಅವರ ಅಧಿಕಾರಿಗಳು ಜರ್ಮನಿಗೆ ತೆರಳಿ ಸಭೆ ನಡೆಸಿದ್ದರು.

ಈ ಹಿಂದೆ ಇದೇ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಈ ಮೊದಲೇ ನಡೆಸಬೇಕಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಸಾಧ್ಯವಾಗಲಿಲ್ಲ. ಅಲ್ಲದೇ, ಹೊಸ ಕೈಗಾರಿಕಾ ನೀತಿ ಪೂರ್ಣಗೊಂಡಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಸಮಾವೇಶ ತಡವಾಗಿದೆ. ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಜಿಮ್‌ ನಡೆಸಲಾಗುವುದು ಎಂದು ಹೇಳಿದ್ದರು.

ಅಲ್ಲದೆ ರಾಜ್ಯ ಸರ್ಕಾರವು ಹೊಸ ಕೈಗಾರಿಕಾ ನೀತಿಯನ್ನು ಅನುಷ್ಠಾನಗೊಳಿಸಿರುವುದರಿಂದ ಕಳೆದ ಎರಡು ಬಾರಿ ನಡೆದ ಸಮಾವೇಶದಲ್ಲಿ ಹರಿದು ಬಂದ ಬಂಡವಾಳಕ್ಕಿಂತ ಹೆಚ್ಚು ಬಂಡವಾಳ ಈ ಬಾರಿ ಹೂಡಿಕೆಯಾಗುವ ಸಾಧ್ಯತೆ ನಿರೀಕ್ಷಿಸಲಾಗಿದೆ. ದೇಶದಲ್ಲಿಯೇ ಕರ್ನಾಟಕವು ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದೆ. ಹೂಡಿಕೆದಾರರಿಗೆ ಅಗತ್ಯ ಸೌಲಭ್ಯಗಳು ರಾಜ್ಯದಲ್ಲಿ ಲಭಿಸಲಿವೆ ಎಂದು ಹೇಳಿದ್ದರು.

Write A Comment