ಕರ್ನಾಟಕ

ಜಯಲಲಿತಾ ಪ್ರಕರಣ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ರಾಜ್ಯಸರ್ಕಾರ

Pinterest LinkedIn Tumblr

jaya

ಬೆಂಗಳೂರು, ಜೂ.1: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ನಿರ್ದೋಷಿ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಹೈಕೋರ್ಟ್ ನೀಡಿರುವ ಗಡುವಿನೊಳಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರಾಜ್ಯಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಚಿವಾಲಯಗಳಲ್ಲಿ ಕಡತ ವಿಲೇವಾರಿಯನ್ನು ಪರಿಶೀಲನೆ ನಡೆಸಿದ ಸಂಪುಟ ಸಭೆ ಬಾಕಿ ಇರುವ ಕಡತಗಳ ವಿಲೇವಾರಿಯನ್ನು ನಿಗದಿತ ಗಡುವಿನೊಳಗೆ ಮಾಡಲು ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲು ತೀರ್ಮಾನಿಸಿದೆ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಉಪನಗರದ ವಾರ್ಡ್ ಸಂಖ್ಯೆ 4ರಲ್ಲಿ ಕರ್ನಾಟಕ ಗೃಹ ಮಂಡಳಿಗೆ ಸೇರಿರುವ 2.17 ಎಕರೆ ಜಮೀನಿನಲ್ಲಿ 35 ವರ್ಷಗಳಿಂದ ಅನಧಿಕೃತವಾಗಿ ನೆಲೆಸಿರುವ 259 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಮೈಸೂರು ಜಿಲ್ಲೆಯ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಹಾಗೂ ಟಿ.ನರಸೀಪುರ ಘಟಕದ ಉಪಕರಣ ಮತ್ತು ಯಂತ್ರೋಪಕರಣಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅವಶ್ಯಕವಿರುವ ತಜ್ಞ ವೈದ್ಯರ ಹುದ್ದೆಗಳನ್ನು ನೇಮಕ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿಯಮ-2015ಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ.

ಬೆಳಗಾವಿಯ ಆರ್‌ಟಿಒ ವೃತ್ತದಲ್ಲಿ ಪೊಲೀಸ್ ಆಯುಕ್ತರ ಕಚೇರಿಯನ್ನು 13.55 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹುಬ್ಬಳ್ಳಿ-ಗುಂತಕಲ್ ರೈಲ್ವೆ ವಿಭಾಗದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 21.91 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಹಾಗೂ ಹುಬ್ಬಳ್ಳಿ-ಕುಸಗಲ್ ರೈಲ್ವೆ ನಿಲ್ದಾಣಗಳ ನಡುವೆ ಹುಬ್ಬಳ್ಳಿ ಡೀಸೆಲ್ ಶೆಡ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಸುರಂಗದೊಂದಿಗೆ ಚತುಷ್ಪಥ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 39.69 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಕನಕಪುರ ನಗರಸಭೆಯ ನೂತನ ಕಚೇರಿ ಕಟ್ಟಡ ಕಾಮಗಾರಿಯನ್ನು 780 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಇಮ್ಮಗೊಂಡನಹಳ್ಳಿ ಹತ್ತಿರ ಜಯಮಂಗಲಿ ನದಿಗೆ ಆರು ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಹಾಗೂ ಭದ್ರಾ ಜಲಾಶಯದ ಕಾಲುವೆ ಜಾಲದ ಆಧುನೀಕರಣಕ್ಕೆ 11.75 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೈಸೂರು ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳಡಿ ದಾಖಲಾಗಿದ್ದ ಕೆಲವೊಂದು ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

Write A Comment