ಕರ್ನಾಟಕ

ಗದಗ: ಸಿಡಿಲಿಗೆ ಒಬ್ಬ, 15 ಕುರಿ ಬಲಿ; ಧಾರಾಕಾರ ಮಳೆಗೆ ರಾಜಧಾನಿಯಲ್ಲಿ ಸಂಚಾರ ವ್ಯತ್ಯಯ; ಹಾಸನ ಜಿಲ್ಲೆಯಲ್ಲಿ 200 ಕೋಳಿ ಸಾವು

Pinterest LinkedIn Tumblr

67676

ಬೆಂಗಳೂರು/ಗದಗ/ಹಾಸನ: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ಸಂಜೆ ಗುಡುಗು-ಸಿಡಿಲು, ಗಾಳಿ ಸಹಿತ ಬಿದ್ದ ಧಾರಾಕಾರ ಮಳೆಗೆ ಗದಗ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ಸಿಡಿಲು ಬಡಿದು ಒಬ್ಬ ಮೃತಪಟ್ಟು, ಕುರ್ತಕೋಟಿಯಲ್ಲಿ ಸಿಡಿಲಿಗೆ 15 ಕುರಿ ಬಲಿಯಾಗಿವೆ. ಹಾಸನ ಜಿಲ್ಲೆಯಲ್ಲಿ 200 ಕೋಳಿ ಸಾವಿಗೀಡಾಗಿವೆ. ಬೆಂಗಳೂರಿನಲ್ಲಿ ಹಲವೆಡೆ ಮರಗಳು ದರೆಗುರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ಗದಗ ತಾಲ್ಲೂಕಿನ ಮುಳಗುಂದ ಪಟ್ಟಣದ ಶ್ರೀಕಾಂತ ಶಿವಲಿಂಗಪ್ಪ ಕೂಡ್ಲಿ(22) ಎಂಬುವರು ಬಹಿರ್ದೆಸೆಗೆ ಹೋಗಿ ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದೇ ತಾಲ್ಲೂಕಿನ ಕುರ್ತುಕೋಟಿಯಲ್ಲಿ ಕರಿಯಪ್ಪ ಎಂಬುವರಿಗೆ ಸೇರಿದ 15 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.

ಹಾಸನ ಜಿಲ್ಲೆಯಲ್ಲಿ ಸಂಜೆ 4.30ರಿಂದ 5ರ ವರೆಗೆ ಬಾರೀ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿಗೆ ಮೂಡಲ ಹಿಪ್ಪೆಯಲ್ಲಿ ಕೋಡಪ್ಪನ ಕೃಷ್ಣ ಎಂಬುವರಿಗೆ ಸೇರಿದ ಕೋಳಿ ಫಾರಂನ ಶಿಟ್ ಹಾರಿಹೋಗಿದ್ದು, ಫಾರಂನಲ್ಲಿದ್ದ 400 ಕೋಳಿಗಳ ಪೈಕಿ 200 ಕೋಳಿಗಳು ಮೃತಪಟ್ಟಿವೆ. ಕೆರೆ ಪಟೇಲ್ ವಂಶದ ಆನಂದ ಎಂಬುವರಿಗೆ ಸೆರಿದ ನೂತನ ನರ್ಸರಿ ಹಾಳಾಗಿದೆ. ಮಂಜುನಾಥ ರೈಸ್ ಮಿಲ್ ಗೆ ನೀರು ನುಗ್ಗಿ ಸಂಗ್ರಹಿಸಿಟ್ಟಿದ್ದ ಭತ್ತಕ್ಕೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿನ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಮರ ಬಿದ್ದಿದೆ. ಇನ್ನೂ ಹಲವೆಡೆ ಮರಗಳು ಧರೆಗುರುಳಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಕುಂಬ್ಳೆ ವೃತ್ತ, ಹೊಸೂರು ರಸ್ತೆ, ಎಂ.ಜಿ. ರಸ್ತೆ, ಲ್ಯಾವೆಲ್ಲೆ ರಸ್ತೆ, ಯಲಹಂಕ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ನೀರಿನಿಂದಾಗಿ ಸಂಚಾರ ವ್ಯತ್ಯಯವಾಗಿದೆ. ಶಾಂತಿನಗರ, ಹೆಬ್ಬಾಳ, ಕಾಡುಗೋಡಿ, ವಿದ್ಯಾರಣ್ಯಪುರ, ವಿಲ್ಸನ್ ಗಾರ್ಡನ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಬಿದ್ದಿದೆ.

Write A Comment