ಹೈದರಾಬಾದ್; ವಿದ್ಯಾರ್ಥಿನಿಯೊಬ್ಬಳನ್ನು ಆಟೋದಲ್ಲಿ ಅಪಹರಿಸಿ ನಾಲ್ಕು ದಿನಗಳ ಕಾಲ ಅಮಾನುಷವಾಗಿ ಅತ್ಯಾಚಾರ ಮಾಡಿದ ದಾರುಣ ಘಟನೆ ಹೈದರಾಬಾದ್‌ನಲ್ಲಿ ಸಂಭವಿಸಿದೆ. ಮೇ 26ರಂದು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಆಟೋವೊಂದರಲ್ಲಿ ಕರೆದುಕೊಂಡು ಹೋದ ಅವಳ ಪರಿಚಿತ ರವಿ ಎಂಬವನು ನಂತರ ತನ್ನ ಗೆಳೆಯರ ಜೊತೆ ಸೇರಿಕೊಂಡು ಸತತವಾಗಿ ನಾಲ್ಕು ದಿನಗಳವರೆಗೆ ಅತ್ಯಾಚಾರ ಮಾಡಿದ.
ವಿದ್ಯಾರ್ಥಿನಿಯ ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ರವಿಯನ್ನು ಬಂಧಿಸಿ ಅವನ ಕಾಲ್ ಡೇಟಾ ಪರಿಶೀಲಿಸಿದ ಬಳಿಕ ಉಳಿದ ಆರೋಪಿಗಳು ವಾರಂಗಲ್ ಜಿಲ್ಲೆಯಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿ ಅಲ್ಲಿಗೆ ಹೋಗಿ ಬಂಧಿಸಿದ್ದಾರೆ.
ರವಿ ಎಂಬವನು ವಿದ್ಯಾರ್ಥಿನಿಗೆ ಪರಿಚಯವಿದ್ದು, ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದ. ನಂತರ ಅವನ ಜೊತೆ ಇನ್ನೂ ಇಬ್ಬರು ಸೇರಿಕೊಂಡು ಬಾಲಕಿಯನ್ನು ಕೊಠಡಿಯೊಂದರಲ್ಲಿ ನಾಲ್ಕು ದಿನಗಳವರೆಗೆ ಕೂಡಿಹಾಕಿ ಪೈಶಾಚಿಕ ಕೃತ್ಯವೆಸಗಿದ್ದರು.